ರಾಜಕೀಯ

ಜನ ನಮ್ಮನ್ನು ನೋಡಿ ಪಕ್ಕಕ್ಕೆ ಉಗಿದು ಹೋಗಬಾರದು; ಹಾಲಿ ರಾಜಕೀಯ ಬೆಳವಣಿಗೆ ಕುರಿತು ರಮೇಶ್ ಕುಮಾರ್ ಬೇಸರ

Srinivasamurthy VN
ಬೆಂಗಳೂರು: ರಾಜಕೀಯ ನಾಯಕರನ್ನು ಕಂಡರೆ ಜನ ನೋಡಿ ಪಕ್ಕಕ್ಕೆ ಉಗಿದು ಹೋಗಬಾರದು ಎಂದು ಸ್ಪೀಕರ್ ರಮೇಶ್ ಕುಮಾರ್ ಹಾಲಿ ರಾಜಕೀಯ ಬೆಳವಣಿಗೆ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಅವರು, 'ನಾನು ಹಿಟ್ಲರ್​ ಅಲ್ಲ, ಕಾನೂನಿನ ಚೌಕಟ್ಟಿನಲ್ಲೇ ಕೆಲಸ ಮಾಡುತ್ತೇನೆ. ಇನ್ನೊಬ್ಬರಿಗೆ ನೋವು ಕೊಟ್ಟು ಬದುಕಲು ನಾನು ಇಷ್ಟ ಪಡಲ್ಲ. ನಾವು ಇನ್ನೊಬ್ಬರ ಬಗ್ಗೆ ಮಾತಾಡಬೇಕಾದರೆ, ನಾವು ಹೇಗೆ ಬದುಕ್ತಿದ್ದೇವೆ ಅಂತಾ ನೋಡಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಸದ್ಯ ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದ ತೀರಾ ನೊಂದಿದ್ದೇನೆ. ನಾಳೆ ವಿಧಾನಸಭೆಯಲ್ಲಿ ಎಲ್ಲವನ್ನೂ ಹೇಳುತ್ತೇನೆ. ಯಾರು ಮಾರಾಟ ಆಗುತ್ತಾರೋ, ಯಾರು ದುಡ್ಡು ಕೊಡುತ್ತಾರೋ ಗೊತ್ತಿಲ್ಲ. ಆಪರೇಷನ್ ಕಮಲದ ಬಗ್ಗೆ ನನಗೆ ಗೊತ್ತಿಲ್ಲ. ನಾವು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ನಮ್ಮನ್ನ ನೋಡಿ ಜನ ಪಕ್ಕಕ್ಕೆ ಉಗಿದು ಹೋಗಬಾರದು ಎಂದರು.
ಕಪ್ಪು ಹಣ ಹೂಡುವುದಕ್ಕೆ ಚಿತ್ರರಂಗವೊಂದು ಕ್ಷೇತ್ರವಾಗಿದೆ. ಒಂದೊಂದು ಪಕ್ಷದಲ್ಲಿ ಒಂದೊಂದು ಭ್ರಷ್ಟಾಚಾರ ಇದೆ. ಭಷ್ಟಾಚಾರ ಈ ದೇಶಕ್ಕೆ ಕಾಡುತ್ತಿರುವ ದೊಡ್ಡ ಮಾರಕವಾಗಿದೆ. ತಪ್ಪು ಯಾರೇ ಮಾಡಿದರೂ ತಪ್ಪೇ. ರಾಜ್ಯದ್ದು ಮಾತ್ರವಲ್ಲ, ದೇಶದ ರಾಜಕೀಯವೇ ಹಾಳಾಗಿದೆ. ಎಲ್ಲಾ ಭ್ರಷ್ಟಾಚಾರಕ್ಕೆ ಚುನಾವಣೆಯೇ ಗಂಗೋತ್ರಿ. ಕಾಯ್ದೆಗಳಲ್ಲಿ ಸುಧಾರಣೆಗಳನ್ನು ತರಬೇಕು. ಪ್ರಧಾನಿ ಮೋದಿ ಕಳೆದ ಐದು ವರ್ಷಗಳಿಂದ ಸಾಕಷ್ಟು ಭರವಸೆ ಮೂಡಿಸಿದ್ದರು. ಆದರೆ ಯಾವುದೇ ಬದಲಾವಣೆ ಆಗಲಿಲ್ಲ. ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ ಎಂದು ಭರವಸೆ ನೀಡಿ ಜನ್ಮತಾಳಿದ್ದ ವ್ಯಕ್ತಿಯೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಮೋದಿ ಬಗ್ಗೆ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.
ಗೈರಾದ ಶಾಸಕರ ಬಗ್ಗೆ ಅಸಮಾಧಾನ
ಇದೇ ವೇಳೆ ಸದನಕ್ಕೆ ಶಾಸಕರು ಬರಲು ಆಗದಿದ್ದರೆ ತಿಳಿಸಬೇಕು. ಗೌರವದಿಂದ ಸದನಕ್ಕೆ ಬರಬೇಕು ಅಂತ ಅವರಿಗೆ ತಿಳಿಸಬೇಕು. ಸದನಕ್ಕೆ ಬರಲು ಆಗದಿದ್ದರೆ ಚುನಾವಣೆಗೆ ಯಾಕೆ ನಿಲ್ಲಬೇಕು ಎಂದು ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದರು. ಆಪರೇಷನ್ ಕಮಲ ಆಡಿಯೋ ಕುರಿತಂತೆ ನಾಳೆ ಸದನದಲ್ಲಿ ಚರ್ಚೆ ಮಾಡುತ್ತೇನೆ. ಮುಖ್ಯಮಂತ್ರಿಗಳು ನನಗೆ ಪತ್ರ ಬರೆದಿದ್ದಾರೆ. ಆಡಿಯೋವನ್ನು ಕೇಳಿದ್ದೇನೆ. ಜನಪ್ರತಿನಿಧಿಗಳು ಗೌರವದಿಂದ ಬದುಕುತ್ತಾರೆನೋ ಅಂತ ಈ ರೀತಿ ಮಾತಾಡ್ತಿದ್ದೇನೆ. ಪ್ರಸ್ತುತ ರಾಜಕೀಯ ಬೆಳವಣಿಗೆಯಿಂದ ನಿಜಕ್ಕೂ ಬೇಸರವಾಗಿದೆ ಎಂದರು.
SCROLL FOR NEXT