ರಾಜಕೀಯ

ಹಾಸನ: ಶಾಸಕ ಪ್ರೀತಂ ಗೌಡ ಮನೆ ಮುಂದೆ ಜೆಡಿಎಸ್ ಪ್ರತಿಭಟನೆ, ಮನೆ ಮೇಲೆ ಕಲ್ಲುತೂರಾಟ, ಓರ್ವನಿಗೆ ಗಾಯ

Srinivasamurthy VN
ಹಾಸನ: ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಮನೆ  ಮೇಲೆ ಜೆಡಿಎಸ್ ಕಾರ್ಯಕರ್ತರು ದಾಳಿ ಮಾಡಿದ್ದು, ಘಟನೆಯಲ್ಲಿ ಓರ್ವ ಕಾರ್ಯರ್ತನಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಸಂಸದ ಎಚ್.ಡಿ.ದೇವೇಗೌಡರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡರ ನಿವಾಸದ ಎದುರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಪ್ರೀತಂ ಗೌಡ ಕೂಡಲೇ ಹೊರಬಂದು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ ಕಾರ್ಯಕರ್ತರು  ಶಾಸಕರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. 
ಈ ನಡುವೆ ಜೆಡಿಎಸ್ ಪ್ರತಿಭಟನಾನಿರತರು ಕಲ್ಲು ತೂರಾಟ ನಡೆಸಿದ್ದರಿಂದ ಮನೆಯೊಳಗೆ ನಿಂತಿದ್ದ ಬಿಜೆಪಿ ಕಾರ್ಯಕರ್ತನೊಬ್ಬನಿಗೆ ಗಾಯವಾಗಿದೆ. ಈ ವೇಳೆ ಪೋಲೀಸರು ಜೆಡಿಎಸ್ ಕಾರ್ಯಕರ್ತರನ್ನು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು. ಅಂತೆಯೇ ಇದೇ ಸಂದರ್ಭದಲ್ಲಿ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು. 
ಬೈಕ್ ಗಳಲ್ಲಿ ಬಂದಿದ್ದ ನೂರಾರು ಜೆಡಿಎಸ್ ಕಾರ್ಯಕರ್ತರು ಹಾಸನದ ವಿದ್ಯಾನಗರದಲ್ಲಿರುವ  ಶಾಸಕ ಪ್ರೀತಂ ಜೆ.ಗೌಡ ನಿವಾಸದ ಎದುರು ಧರಣಿ ಕುಳಿತು ತೊಲಗಲಿ,ತೊಲಗಲಿ ಪ್ರೀತಂ ತೊಲಗಲಿ ಎಂದು ಘೋಷಣೆ ಕೂಗಿದರು.  ಅಂತೆಯೇ ಪ್ರೀತಂ ವಿರುದ್ಧ ಎಸ್ಐಟಿ ತನಿಖೆ ನಡೆಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 
ಇದೇ ಸಂದರ್ಭದಲ್ಲೇ ಜೆಡಿಎಸ್ ಕಾರ್ಯಕರ್ತವೋರ್ವ ಕಲ್ಲು ತೂರಾಟ ಮಾಡಿದ ಪರಿಣಾಮ ಪ್ರೀತಂ ಗೌಡ ಬೆಂಬಲಗನೋರ್ವ ಗಾಯಗೊಂಡಿದ್ದಾನೆ. ಗಾಯಾಳು ಬೆಂಬಲಿಗನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಜೆಡಿಎಸ್ ಮಾಧ್ಯಮ ವಕ್ತಾರ ಹೊಂಗೆರೆ ರಘು, 'ಕ್ಷೇತ್ರದ ಅಭಿವೃದ್ಧಿಗೆ ಪ್ರೀತಂ ಗೌಡ ಒಂದು ರೂಪಾಯಿ ಅನುದಾನ ತಂದಿಲ್ಲ. ಶಾಸಕ ಎಂಬ ಶಿರೋನಾಮೇಯಡಿ ತಮ್ಮ  ವೈಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ. ದೇವರು ಯಾರಿಗೂ ನೂರು, ಇನ್ನೂರು ವರ್ಷ ಬದುಕು ಎಂದು ಬಾಂಡ್ ಬರೆದು ಕಳುಹಿಸಿರುವುದಿಲ್ಲ. ಜೆಡಿಎಸ್ ವರಿಷ್ಠ ದೇವೇಗೌಡರಿಗೆ ರಾಜಕೀಯದಲ್ಲಿ ಆಗಿರುವಷ್ಟು ಅನುಭವ ಅವರಿಗೆ ವಯಸ್ಸಾಗಿಲ್ಲ. ಸಾಂದರ್ಭಿಕವಾಗಿ ಈ ಕ್ಷೇತ್ರದ ಶಾಸಕರಾಗಿದ್ದಾರೆ. ಅವರ ಬಗ್ಗೆ ಲಘುವಾಗಿ ಮಾತನಾಡಿದವರೆಲ್ಲ ಠೇವಣಿ ಇಲ್ಲದಂತೆ ಹೆಸರಿಲ್ಲದೆ ಕಣ್ಮರೆಯಾಗಿದ್ದಾರೆ. ಪ್ರೀತಂ ಗೌಡ ಕೂಡಲೇ ಜಿಲ್ಲೆಯ ಜನತೆ ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲವಾದರೆ ಜಿಲ್ಲೆಯ ಜನತೆ ದಂಗೆ ಹೇಳಬೇಕಾಗುತ್ತದೆ’ ಎಂದು ಎಚ್ಚರಿಸಿದರು
ಪ್ರತಿಭಟನೆಯಲ್ಲಿ ಮುಖಂಡರಾದ ಹೆಚ್.ಎಸ್. ಅನಿಲ್ ಕುಮಾರ್, ಎಸ್. ದ್ಯಾವೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಸ್ವರೂಪ್ ಇದ್ದರು ಎಂದು ತಿಳಿದುಬಂದಿದೆ.
SCROLL FOR NEXT