ರಾಜಕೀಯ

ಪಕ್ಷದ ಕೆಲ ನಿರ್ಣಯಗಳಿಂದ ಬೇಸರವಾಗಿರುವುದು ನಿಜ: ಶಾಸಕ ಮಹೇಶ್ ಕುಮಟಹಳ್ಳಿ

Srinivasamurthy VN
ಬೆಂಗಳೂರು: ಕಾಂಗ್ರೆಸ್ ರೆಬೆಲ್ ಶಾಸಕ ಮಹೇಶ್ ಕುಮಟಹಳ್ಳಿ ಕೊನೆಗೂ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾಗಿದ್ದು, ಪಕ್ಷದೊಂದಿಗಿನ ಭಿನ್ನಾಭಿಪ್ರಾಯ ನಿಜ ಎಂದು ಹೇಳಿದ್ದಾರೆ.
ಪಕ್ಷದ ರೆಬೆಲ್ ಶಾಸಕರ ವಿರುದ್ಧ ಕಾಂಗ್ರೆಸ್ ಅನರ್ಹ ನಿರ್ಣಯ ಕೈಗೊಂಡಿ ಬೆನ್ನಲ್ಲೇ ಭಿನ್ನಮತೀಯ ಶಾಸಕರು ಒಬೊಬ್ಬರಾಗಿ ಬೆಂಗಳೂರಿಗೆ ಆಗಮಿಸುತ್ತಿದ್ದು, ನಿನ್ನೆ ತಡರಾತ್ರಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ರಮೇಶ್ ಜಾರಕಿಹೊಳಿ ಬೆಂಗಳೂರಿಗೆ ದೌಡಾಯಿಸಿದ್ದರು. ಇದೀಗ ಅವರ ಬೆನ್ನಲ್ಲೇ ಶಾಸಕ ಮಹೇಶ್ ಕಮಟಹಳ್ಳಿ ಕೂಡ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಬೆಂಗಳೂರಿಗೆ ಆಗಮಿಸುತ್ತಿದ್ದಂತೆಯೇ ಅವರನ್ನು ಸುತ್ತುವರಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದೊಂದಿಗೆ ತಾವು ಮುನಿಸಿಕೊಂಡಿರುವುದು ನಿಜ. ಪಕ್ಷದ ಕೆಲ ನಿರ್ಣಯಗಳು ತಮಗೆ ಬೇಸರತಂದಿದೆ. ಬಜೆಟ್ ನಲ್ಲೂ ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಅಂತೆಯೇ ನಾನು ಎಲ್ಲಿಗೂ ಹೋಗಿಲ್ಲ, ಇಲ್ಲಿಯೇ ಇದ್ದೇನೆ ಎಂದಿರುವ ಶಾಸಕ ಮಹೇಶ್, ಇಲ್ಲಿ ಕೆಲ ತಪ್ಪು ಗ್ರಹಿಕೆಗಳು ಉಂಟಾಗಿದ್ದು, ಅದನ್ನು ಬಗೆಹರಿಸಬೇಕಿದೆ ಎಂದೂ ಹೇಳಿದ್ದಾರೆ.
ಈ ಹಿಂದೆ ವಿಪ್ ಜಾರಿ ಹೊರತಾಗಿಯೂ ಪಕ್ಷ ಶಾಸಕಾಂಗ ಸಭೆಗೆ ಗೈರಾಗಿದ್ದ ನಾಲ್ಕು ಶಾಸಕರ ವಿರುದ್ಧ ಸ್ಪೀಕರ್ ಗೆ ದೂರು ನೀಡಲಾಗಿತ್ತು. ಈ ಪೈಕಿ ಶಾಸಕ ರಮೇಶ್ ಜಾರಕಿಹೊಳಿ, ಶಾಸಕ ಮಹೇಶ್ ಕುಮಟಹಳ್ಳಿ ಕೂಡ ಸೇರಿದ್ದಾರೆ. ಸ್ಪೀಕರ್ ಗೆ ಪಕ್ಷದ ಮುಖಂಡರು ದೂರು ನೀಡಿದ ಬೆನ್ನಲ್ಲೇ ಶಾಸಕ ಸ್ಥಾನ ಅನರ್ಹಗೊಳ್ಳುವ ಭೀತಿಯಿಂದ ನಾಪತ್ತೆಯಾಗಿದ್ದ ಶಾಸಕರು ಒಬ್ಬೊಬ್ಬರಾಗಿ ಪ್ರತ್ಯಕ್ಷರಾಗುತ್ತಿದ್ದು, ನಿನ್ನೆ ರಮೇಶ್ ಜಾರಕಿಹೊಳಿ ಕೂಡ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಮೂಲಗಳ ಪ್ರಕಾರ ಎಐಸಿಸಿ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ನ ಒಂದು ತಂಡ ರಮೇಶ್ ಜಾರಕಿಹೊಳಿ ಜೊತೆ ಮಾತನಾಡಿದ್ದರು, ಜೊತೆಗೆ ಪಕ್ಷಕ್ಕೆ ಮರಳುವಂತೆ ಹೇಳಿದ್ದರು. ರಾಜಕೀಯ ದೊಂಬರಾಟಕ್ಕೆ ಅಂತ್ಯ ಹಾಡಲು ನಿರ್ದರಿಸಿರುವ ಕಾಂಗ್ರೆಸ್ ಅತೃಪ್ತರಿಗೆ ಸಂಪುಟದಲ್ಲಿ ಅವಕಾಶ ನೀಡಲು ನಿರ್ಧರಿಸಿದೆ. ಆದರೆ  ಕೆಸಿ ವೇಣುಗೋಪಾಲ್ ಕೋರಿಕೆಗೆ ಜಾರಕಿಹೊಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಕೇಳಿ ಬಂದಿದೆ.
ಸಹೋದರರಾದ ಬಾಲಚಂದ್ರ ಮತ್ತು ಲಖನ್ ಜಾರಕಿಹೊಳಿ, ಬಿಜೆಪಿ ಸೇರುವ ಪ್ರಯತ್ನ ಬಿಡಬೇಕೆಂದು ರಮೇಶ್ ಜಾರಕಿ ಹೊಳಿಗೆ ಹೇಳಿದ್ದರು.
SCROLL FOR NEXT