ರಾಜಕೀಯ

ಹಾಸನ ಶಾಸಕ ಪ್ರೀತಂ ಗೌಡ ಮನೆ ಮುಂದೆ ಜೆಡಿಎಸ್ ಕಾರ್ಯಕರ್ತರ ಕಲ್ಲು ತೂರಾಟ: ಕೇಂದ್ರ ಗೃಹ ಸಚವರಿಗೆ ದೂರು: ಬಿ.ಎಸ್.ವೈ

Srinivasamurthy VN
ಬೆಂಗಳೂರು: ಹಾಸನ ಜೆಡಿಎಸ್ ಶಾಸಕ ಪ್ರೀತಂ ಗೌಡ ಅವರ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ದೂರು ನೀಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಆಪರೇಷನ್ ಕಮಲ ಕಾರ್ಯಾಚರಣೆ ಕುರಿತ ಆಡಿಯೋದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ಆಡಿದ್ದಾರೆ ಎನ್ನಲಾದ ಆಕ್ಷೇಪಾರ್ಹ ಮಾತುಗಳನ್ನು ವಿರೋಧಿಸಿ ಹಾಸನ ಶಾಸಕರ ನಿವಾಸದ ಮುಂದೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟಿಸಿ, ಘೋಷಣೆ ಕೂಗಿ, ದಾಂಧಲೆ ನಡೆಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರೊಬ್ಬರು ನಡೆಸಿದ ಕಲ್ಲು ತೂರಾಟದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಜೆಡಿಎಸ್ ಕಾರ್ಯಕರ್ತ ಪಡೆ ತೀವ್ರ ಆಕ್ರೋಶಗೊಂಡು ಶಾಸಕರು ಮತ್ತು ಅವರ ಬೆಂಬಲಿಗರ ವಿರುದ್ಧ ಘೋಷಣೆ ಕೂಗಿತು. ಈ ಸಂದರ್ಭದಲ್ಲಿ ಪ್ರೀತಂ ಗೌಡ ಅವರ ತಂದೆ ಮತ್ತು ಮನೆಯಲ್ಲಿದ್ದರು ಎನ್ನಲಾಗಿದೆ. ಜೆಡಿಎಸ್ ಕಾರ್ಯಕರ್ತ ತೂರಿದ ದೊಡ್ಡ ಕಲ್ಲು ಬಿಜೆಪಿ ಕಾರ್ಯಕರ್ತನ ಮುಖಕ್ಕೆ ಬಡಿದಿದ್ದು, ಇದರಿಂದ ಅವರ ಕಣ್ಣಿನ ಭಾಗದಲ್ಲಿ ತೀವ್ರಗಾಯವಾಗಿ ರಕ್ತ ಸುರಿಯಿತು. ಈ ಬೆಳವಣಿಗೆ ಬಿಜೆಪಿ ಪಾಳಯವನ್ನು ಕರೆಳಿಸಿದ್ದು, ಹಾಸನದಲ್ಲೇ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಶಾಸಕ ಪ್ರೀತಂ ಗೌಡ ವಿಧಾನಸೌಧದಲ್ಲಿ ಮಾತನಾಡಿ, ಈ ಘಟನೆಯಿಂದ ತಾವು ವಿಚಲಿತರಾಗಿಲ್ಲ. ತಮ್ಮನ್ನು ಮುಗಿಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಆದೇಶ ನೀಡಿದ್ದಾರೆ. ಇದನ್ನು ಸ್ವತಃ ಅಲ್ಲಿದ್ದ ಕಾರ್ಯಕರ್ತರೇ ಹೇಳಿದ್ದಾರೆ. ನನ್ನನ್ನು ಎಲ್ಲಿಯೇ ಇದ್ದರೂ ಹುಡುಕಿ ಬಿಡಬೇಡಿ ಎಂದು ಈ ಇಬ್ಬರು ತಮ್ಮ ಕಾರ್ಯಕರ್ತರಿಗೆ ನಿರ್ದೇಶನ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಜೆಡಿಎಸ್ ನ ಗೂಂಡಾ ರಾಜಕಾರಣಕ್ಕೆ ತಾವು ಹೆದರುವುದಿಲ್ಲ. ಓಡಿ ಹೋಗುವ ಹೇಡಿ ನಾನಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿ ಈ ಬಗ್ಗೆ ಉಗ್ರ ಹೋರಾಟ ಮಾಡಲಾಗುವುದು. ಹಾಸನದಲ್ಲಿರುವ ಬಿಜೆಪಿ ಕಾರ್ಯಕರ್ತರು ಶಾಂತಿಯಿಂದಿರಬೇಕು ಎಂದು ಮನವಿ ಮಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಗೂಂಡಾ ರಾಜಕಾರಣಕ್ಕೆ ಹೆದರುವುದಿಲ್ಲ. ಇದರ ವಿರುದ್ಧ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ದೂರು ಸಲ್ಲಿಸಲಾಗುವುದು. ಮುಂದಿನ ಅಗತ್ಯ ಕಾನೂನು ಕ್ರಮವನ್ನು ನಾವು ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.  
ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಪ್ರೀತಂ ಗೌಡ ಅವರನ್ನು ಹೆದರಿಸಿ ರಾಜಕಾರಣ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಹಾಸನದಲ್ಲೇ ಪ್ರತಿಭಟನಾ ಸಭೆ ನಡೆಸುತ್ತೇವೆ. ಇವರ ಗುಂಡಾ ರಾಜಕೀಯವನ್ನು ವಿರೋಧಿಸುತ್ತೇವೆ. ಗೂಂಡಾಗಿರಿ ಮಾಡುವ ಪ್ರವೃತ್ತಿಯನ್ನು ಸಹಿಸುವುದಿಲ್ಲ. ಪೊಲೀಸರು ಸಹ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು. ಮಾಜಿ ಗೃಹ ಸಚಿವ ಆರ್. ಅಶೋಕ್ ಮಾತನಾಡಿ, ಪ್ರೀತಂ ಗೌಡ ಅವರ ಮನೆಯ ಮುಂದೆ ಧರಣಿ ನಡೆಸಿ ಹಲ್ಲೆ ನಡೆಸುವ ಪ್ರಯತ್ನ ಮಾಡಿರುವುದು ನಡೆಸಿರುವುದು ಸರಿಯಲ್ಲ. ಇದು ಜೆಡಿಎಸ್ ನ ಹತಾಶೆಯನ್ನು ತೋರಿಸುತ್ತದೆ. ಇಂತಹ ರೌಡಿಸಂ ರಾಜಕೀಯವನ್ನು ನಮ್ಮ ಪಕ್ಷ ಸಹಿಸುವುದಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ ಎಂದರು.
SCROLL FOR NEXT