ರಾಜಕೀಯ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಜೆಡಿಎಸ್ ತೆಕ್ಕೆಗೆ!

Shilpa D
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ  ಜೆಡಿಎಸ್ ಗೆ ಐದು ಸೀಟುಗಳನ್ನು ಬಿಟ್ಟು ಕೊಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ನಡೆದ ಕಾಂಗ್ರೆಸ್ ಸಭೆಯಲ್ಲಿ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರವನ್ನು ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಬಿಟ್ಟು ಕೊಡಲು ನಿರ್ಧರಿಸಲಾಗಿದೆ. ಸದ್ಯ ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿ ಡಿ.ವಿ ಸದಾನಂದಗೌಡ ಸಂಸದರಾಗಿದ್ದಾರೆ.
ಪ್ರಾದೇಶಿಕ ಚುನಾವಣಾ ಸಮಿತಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಜಿ. ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ,ಹಾಗೂ ರಾಮಲಿಂಗಾ ರೆಡ್ಡಿ ಸೋಮವಾರ ಸಂಜೆ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.
ಸದ್ಯ ಜೆಡಿಎಸ್ ನ ಹಾಲಿ ಸಂಸದರ ಕ್ಷೇತ್ರವನ್ನು ಅವರಿಗೆ ಬಿಟ್ಟುಕೊಡುವಂತೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತು ಎಚ್.ಡಿ ಕುಮಾರಸ್ವಾಮಿ ಕಾಂಗ್ರೆಸ್ ಗೆ ಮನವಿ ಮಾಡಿದ್ದಾರೆ, 
ಬೆಂಗಳೂರು ಉತ್ತರ, ಮಂಡ್ಯ, ಹಾಸನ ಹಾಗೂ ಉತ್ತರ ಕರ್ನಾಟಕದ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಸಂಸದರಿದ್ದು ಆ ಕ್ಷೇತ್ರಗಳನ್ನು ಅವರಿಗೆ ಬಿಟ್ಟುಕೊಡುವಂತೆ ಕಾಂಗ್ರೆಸ್ ಗೆ ಮನವಿ ಮಾಡುವಂತೆ ಹಲವು ಜೆಡಿಎಸ್ ಮುಖಂಡರು ವರಿಷ್ಠರ ಬಳಿ ಮನವಿ ಮಾಡಿದ್ದರು.
ಕಾಂಗ್ರೆಸ್ ಪ್ರಚಾರ ಸಮಿತಿ ಈಗಾಗಲೇ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸುತ್ತಿದ್ದು, ಪ್ರಿಯಾಂಕಾ ವಾದ್ರಾ ಸ್ಟಾರ್ ಕ್ಯಾಂಪೈನರ್ ಆಗಲಿದ್ದಾರೆ, ತಳ ಮಟ್ಟದಲ್ಲಿ ಪಕ್ಷ ಬಲವರ್ಧಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಸಚಿವ ಯು,ಟಿ ಖಾದರ್ ಹೇಳಿದ್ದಾರೆ.
SCROLL FOR NEXT