ರಾಜಕೀಯ

ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಉಮೇಶ್ ಜಾಧವ್ ನಡುವೆ ಸ್ಪರ್ಧೆ?

Sumana Upadhyaya

ಬೆಂಗಳೂರು: ಲೋಕಸಭೆ ಚುನಾವಣೆ ಸನ್ನಿಹಿತವಾಗಿದ್ದು ರಾಜಕೀಯ ಚಟುವಟಿಕೆ ಗರಿಗೆದರಿದೆ. ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಅವರದ್ದೇ ಪಕ್ಷದ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಅವರಿಂದಲೇ ಸ್ಪರ್ಧೆ ಎದುರಿಸುವ ಸಾಧ್ಯತೆಯಿದೆ.

ಕಾಂಗ್ರೆಸ್ ನ ಬಂಡಾಯ ಶಾಸಕರಾಗಿ ಗುರುತಿಸಿಕೊಂಡಿರುವ ಉಮೇಶ್ ಜಾಧವ್ ಮುಂಬೈಗೆ ಹೋಗಿ ಯಡಿಯೂರಪ್ಪನವರ ಆಡಿಯೊ ಟೇಪ್ ಹೊರಬಿದ್ದ ನಂತರ ರಾಜ್ಯಕ್ಕೆ ವಾಪಸ್ಸಾಗಿದ್ದರು. ಮುಂದಿನ ಲೋಕಸಭೆ ಚುನಾವಣೆ ವೇಳೆ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಕಲಬುರಗಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರತಿನಿಧಿ ಸಂಪರ್ಕಿಸಿದಾಗ, ನಾನಿನ್ನೂ ನಿರ್ಧಾರದ ಹಂತದಲ್ಲಿದ್ದೇನೆ. ಸದ್ಯದಲ್ಲಿಯೇ ಘೋಷಣೆ ಮಾಡಲಿದ್ದೇನೆ. ಇದರಿಂದ ತಮಗೆ ಕೆಟ್ಟ ಹೆಸರು ಬರಬಹುದು ಎಂಬ ಯೋಚನೆಯಿದೆಯೇ ಎಂದು ಕೇಳಿದಾಗ ನಾನು ಜನರೊಂದಿಗೆ ಗುರುತಿಸಿಕೊಂಡಿದ್ದೇನೆ. ಜನರು ಏನು ಹೇಳುತ್ತಾರೆ, ನಾನು ಹಾಗೆ ಮಾಡುತ್ತೇನೆ. ನಿರ್ಧಾರ ಕೈಗೊಳ್ಳುವ ಮುನ್ನ ಕೆಲವು ವಿಷಯಗಳನ್ನು ಇತ್ಯರ್ಥಪಡಿಸಬೇಕಿದೆ ಎಂದರು.

ಬಿಜೆಪಿಗೆ ಜಾಧವ್ ಬಂದರೆ ಲಾಭವೇ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ರೇವು ನಾಯಕ್ ಬೆಳಮಗಿ ಖರ್ಗೆ ವಿರುದ್ಧ 73 ಸಾವಿರ ಮತಗಳ ಅಂತರದಲ್ಲಿ ಸೋಲನ್ನು ಕಂಡಿದ್ದರು. ನಂತರ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡದ್ದಕ್ಕೆ ಬಿಜೆಪಿ ತೊರೆದಿದ್ದರು.

ಜಾಧವ್ ಇಲ್ಲದಿದ್ದರೆ ಖರ್ಗೆ ವಿರುದ್ಧ ಹೋರಾಡಲು ಬಿಜೆಪಿಗೆ ಪ್ರಬಲ ಸ್ಪರ್ಧಿ ತಕ್ಷಣಕ್ಕೆ ಇಲ್ಲ. ಬಿಜೆಪಿ ಈ ತಂತ್ರವನ್ನು ಹಿಂದೆಯೇ ಕಂಡುಕೊಂಡಿದೆ. 2009ರಲ್ಲಿ ಕಾಂಗ್ರೆಸ್ ನಿಂದ ಗುರುಪಾದಪ್ಪ ನಾಗಮಾರಪಳ್ಳಿ ಮತ್ತು 2014ರಲ್ಲಿ ಜೆಡಿಎಸ್ ನಿಂದ ಬೆಳಮಗಿ ಸ್ಪರ್ಧಿಸಿದ್ದರು.

SCROLL FOR NEXT