ರಾಜಕೀಯ

ಕೆಲ ನಿಗಮ ಮಂಡಳಿ ನೇಮಕ ತಡೆ ಹಿಡಿದ ಸಿಎಂ ವಿರುದ್ಧ 'ಕೈ' ಅಸಮಾಧಾನ

Lingaraj Badiger
ಬೆಂಗಳೂರು: ನಿಗಮ ಮಂಡಳಿ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ - ಜೆಡಿಎಸ್ ನಡುವಿನ ಸಂಘರ್ಷ ಮುಂದುವರೆದಿದ್ದು, ಕೆಲ ನಿಗಮ ಮಂಡಳಿ ಹಾಗೂ ಒಂದು ಸಂಸದೀಯ ಕಾರ್ಯದರ್ಶಿ ನೇಮಕ ತಡೆ ಹಿಡಿದಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 
ಪಕ್ಷದ ಮೂಲಗಳ ಪ್ರಕಾರ, ಕೆಲವು ನಿಗಮ ಮಂಡಳಿ ಅಧ್ಯಕ್ಷರ ನೇಮಕವನ್ನು ತಡೆ ಹಿಡಿದ ಸಿಎಂ ವಿರುದ್ಧ ಹಲವು ಕಾಂಗ್ರೆಸ್ ನ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ದೋಸ್ತಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು, ಸಿಎಂ ಏಕೆ ತಡೆ ಹಿಡಿದಿದ್ದಾರೆ ಅಂತ ನನಗೆ ಗೊತ್ತಿಲ್ಲ. ಈ ಬಗ್ಗೆ ಕುಮಾರಸ್ವಾಮಿ ಜತೆ ಮಾತನಾಡುತ್ತೇನೆ ಎಂದರು.
ಕಾಂಗ್ರೆಸ್ ನೀಡಿದ್ದ ಪಟ್ಟಿಯಲ್ಲಿದ್ದ 19 ನಿಗಮ ಮಂಡಳಿ ಮತ್ತು 9 ಸಂಸದೀಯ ಕಾರ್ಯದರ್ಶಿ ಸ್ಥಾನಗಳ ಪೈಕಿ 14 ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ 8 ಸಂಸದೀಯ ಕಾರ್ಯದರ್ಶಿಗಳ ನೇಮಕಕ್ಕೆ ಸಿಎಂ ಕುಮಾರಸ್ವಾಮಿ ನಿನ್ನೆ ಸಹಿ ಹಾಕಿದ್ದರು. ಇದು ಐದು ಮಹತ್ವದ ನಿಗಮ ಮಂಡಳಿಗಳ ನೇಮಕ ಹಾಗೂ ಒಂದು ಸಂಸದೀಯ ಕಾರ್ಯದರ್ಶಿ ನೇಮಕವನ್ನು ತಡೆ ಹಿಡಿದಿದ್ದಾರೆ. 
ವಿಧಾನಪರಿಷತ್ ಸದಸ್ಯ ಹಾಗು ಹಾಸನದ ಕಾಂಗ್ರೆಸ್ ಮುಖಂಡ ಗೋಪಾಲಸ್ವಾಮಿ ಅವರ ಸಂಸದೀಯ ಕಾರ್ಯದರ್ಶಿ ಸ್ಥಾನಕ್ಕೂ ಸಿಎಂ ಒಪ್ಪಿಗೆ ನೀಡಿಲ್ಲ.
ಡಿಸೆಂಬರ್ 22ರಂದು ದೋಸ್ತಿ ಸರ್ಕಾರದ ಸಂಪುಟ ವಿಸ್ತರಣೆಯಾಗಿತ್ತು. ಅಂದೇ ನಿಗಮ ಮಂಡಳಿ ನೇಮಕ ಪಟ್ಟಿಯನ್ನು ಸಿಎಂ ಕೈಗೆ ಕಾಂಗ್ರೆಸ್‌ ಒಪ್ಪಿಸಿತ್ತು. ಆದರೆ ಜೆಡಿಎಸ್‌ ಸಚಿವರು ನೋಡಿಕೊಳ್ಳುವ ಇಲಾಖೆಗಳ ಸಂಸ್ಥೆಗಳಿಗೂ ಕಾಂಗ್ರೆಸ್‌ ಶಾಸಕರನ್ನು ನಿಯೋಜಿಸಲು ಹೊರಟಿದ್ದನ್ನು ನೋಡಿ ಸಿಎಂ ಆಕ್ಷೇಪಿಸಿದ್ದರು.
SCROLL FOR NEXT