ರಾಜಕೀಯ

ಸಿಬಿಐ ಕೇಸಿನಲ್ಲಿ ಸುಪ್ರೀಂ ಕೋರ್ಟ್ ಮೋದಿಯವರ ಮುಖಕ್ಕೆ ಹೊಡೆದ ರೀತಿಯಲ್ಲಿ ತೀರ್ಪು ನೀಡಿದೆ: ವೇಣುಗೋಪಾಲ್

Sumana Upadhyaya

ಬೆಂಗಳೂರು: ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ಕೇಸಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಪ್ರಧಾನಿ ಮೋದಿಯವರ ಮುಖದ ಮೇಲೆ ಹೊಡೆತವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹೇಳಿದ್ದಾರೆ.

ಅಲ್ಲದೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇಕಡಾ 10ರಷ್ಟು ಮೀಸಲಾತಿ ನೀಡುವ ವಿಧೇಯಕವನ್ನು ಈ ಸಮಯದಲ್ಲಿ ಜಾರಿಗೆ ತರುವುದರ ಹಿಂದಿನ ರಾಜಕೀಯ ಉದ್ದೇಶವೇನೆಂದು ಕೂಡ ಪ್ರಶ್ನಿಸಿದ್ದಾರೆ.

ಸಿಬಿಐ ಮುಖ್ಯಸ್ಥರನ್ನು ತೆಗೆದುಹಾಕುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಪ್ರಧಾನಿ ಮೋದಿಯವರ ಮುಖಕ್ಕೆ ನೇರವಾಗಿ ಹೊಡೆದಂತಿದೆ. ಸಿಬಿಐ ಮುಖ್ಯಸ್ಥರನ್ನು ಮಧ್ಯರಾತ್ರಿಯಲ್ಲಿ ಏಕಾಏಕಿ ಬದಲಾಯಿಸುವ ಕುರಿತು ಪ್ರಧಾನ ಮಂತ್ರಿ ಕಚೇರಿಯ ಮಧ್ಯ ಪ್ರವೇಶ ಅಸಾಮಾನ್ಯ ನಡವಳಿಕೆ. ಸರ್ಕಾರದ ಕ್ರಮ ಸ್ವೀಕಾರಾರ್ಹವಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ತೀರ್ಪು ತೋರಿಸುತ್ತದೆ ಎಂದು ವೇಣುಗೋಪಾಲ್ ಅವರು ನಿನ್ನೆ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.

ಸಮಾಜದ ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿಯನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ಆದರೆ ನಾಲ್ಕೂವರೆ ವರ್ಷ ಕಳೆದ ನಂತರ ಏಕೆ ಮಾಡಬೇಕಿತ್ತು? ಇದೊಂದು ಸಾಂವಿಧಾನಿಕ ತಿದ್ದುಪಡಿಯಾಗಿದ್ದು 10 ವಿಧಾನಸಭೆಗಳಲ್ಲಿ ಅನುಮೋದನೆಯಾಗಬೇಕು. ಅಷ್ಟು ಮಾಡಲು ಈಗ ಸಮಯವೆಲ್ಲಿದೆ ಎಂದು ಪ್ರಶ್ನಿಸಿದರು.

ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಮೋದಿ ಸರ್ಕಾರದ ವಿರುದ್ದ ಟೀಕೆ ಮುಂದುವರಿಸಿದ ಅವರು, ರಕ್ಷಣಾ ಸಚಿವರು ಎರಡು ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಹೆಚ್ ಎಎಲ್ ಗೆ ಹೊರತಾಗಿ ಅನಿಲ್ ಅಂಬಾನಿಗೆ ವಿಮಾನ ಖರೀದಿ ಗುತ್ತಿಗೆ ನೀಡಲು ಯಾರು ಒಪ್ಪಿಕೊಂಡಿದ್ದು? ಈ ವ್ಯವಹಾರದಲ್ಲಿ ಪ್ರಧಾನ ಮಂತ್ರಿ ಕಚೇರಿಯ ಮಧ್ಯಪ್ರವೇಶದ ಪೂರ್ವಗ್ರಹಿಕೆ ರಕ್ಷಣಾ ಸಚಿವಾಲಯಕ್ಕೆ ಇತ್ತೆ? ಈ ಎರಡು ಪ್ರಶ್ನೆಗಳಿಗೆ ಅವರು ಉತ್ತರಿಸಲಿ. ಅಲ್ಲದೆ ಈ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

SCROLL FOR NEXT