ರಾಜಕೀಯ

ಪ್ರಧಾನಿ ಮೋದಿ 'ಕ್ಲರ್ಕ್' ಟೀಕೆಗೆ ಸಿಎಂ ಖಡಕ್ ತಿರುಗೇಟು, ಹೆಚ್ ಡಿಕೆ ಹೇಳಿದ್ದೇನು?

Srinivasamurthy VN
ಬೆಂಗಳೂರು: ತಮ್ಮ ವಿರುದ್ಧ ಪ್ರಧಾನಿ ಮೋದಿ ಮಾಡಿರುವ 'ಕ್ಲರ್ಕ್' (ಗುಮಾಸ್ತ) ಟೀಕೆಗೆ ಅದೇ ಧಾಟಿಯಲ್ಲಿ ತಿರುಗೇಟು ನೀಡಿರುವ ಸಿಎಂ ಕುಮಾರಸ್ವಾಮಿ, ನನ್ನದಲ್ಲದ ಹೇಳಿಕೆಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಅವರ ಮೈತ್ರಿ ಸರ್ಕಾರಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನ ಫಲಿಸುವುದಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಪ್ರಧಾನಿ ಮೋದಿ ಅವರು ಸುಳ್ಳು ಹೇಳಿದ್ದಾರೆ. ನಾನು ಎಂದೂ ಆ ರೀತಿ ಹೇಳಿಕೆ ನೀಡಿಯೇ ಇಲ್ಲ. ನನ್ನದಲ್ಲದ ಹೇಳಿಕೆಯನ್ನು ನನ್ನದು ಎಂದು ಹೇಳಿ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ಕೂಡ ಪ್ರಧಾನಿ ಮೋದಿ ಇದೇ ರೀತಿಯಲ್ಲಿ ದೇಶದ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದರು. ರೈತರ ಸಾಲಮನ್ನಾ ವಿಚಾರದಲ್ಲಿ ಸಾಲ ಮನ್ನಾದ ಜಿಲ್ಲಾವಾರು ಮಾಹಿತಿಯನ್ನು ಬಹಿರಂಗಗೊಳಿಸಿ, ಪ್ರಧಾನಿ ಮೋದಿ ಸುಳ್ಳನ್ನು ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. 
ಅಂತೆಯೇ ಮೋದಿ ಸುಳ್ಳು ಹೇಳಿಕೆಗಳ ಮೂಲಕ ಮೈತ್ರಿ ಸರ್ಕಾರಕ್ಕೆ ಧಕ್ಕೆಯನ್ನುಂಟು ಮಾಡುವ ಪ್ರಯತ್ನ ಮಾಡುತ್ತಿದ್ದು, ಅವರ ಯಾವುದೇ ಪ್ರಯತ್ನಗಳೂ ಸಫಲವಾಗುವುದಿಲ್ಲ. ಮೈತ್ರಿ ಸರ್ಕಾರ ಸಂಪೂರ್ಣ ಅವಧಿಯವರೆಗೂ ಆಡಳಿತ ನಡೆಸಲಿದೆ ಮತ್ತು ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಕೂಡ ಟೀಕೆ
ಇದೇ ವೇಳೆ, ಪ್ರಧಾನಿ ಮೋದಿ ವಿರುದ್ಧ ಹೆಚ್​ಡಿಕೆ ಮಾಡಿರುವ ತಿರುಗೇಟಿಗೆ ಸಿದ್ದರಾಮಯ್ಯ ಕೂಡ ಧ್ವನಿಗೂಡಿಸಿದ್ದಾರೆ. ಮೋದಿ ಅವರ ಹುಟ್ಟುಗುಣ ಸುಟ್ಟರೂ ಹೋಗದು ಎಂದು ಟೀಕಿಸಿರುವ ಸಿದ್ದರಾಮಯ್ಯ, ಮೋದಿ ಅವರು ಆರೆಸ್ಸೆಸ್​ನ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಈ ಅನುಭವದಲ್ಲೇ ಅವರು ಕುಮಾರಸ್ವಾಮಿ ಬಗ್ಗೆ ಮಾತನಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಇನ್ನು ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದ ಪ್ರಧಾನಿ ಮೋದಿ, ಕರ್ನಾಟಕ ಸಿಎಂ, ನಾನು ಇಲ್ಲಿ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿಲ್ಲ. ಬದಲಾಗಿ ಒಬ್ಬ ಕ್ಲರ್ಕ್​ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್​ ಮೂಗು ತೂರಿಸುತ್ತಿರುವುದೇ ಇದಕ್ಕೆ ಕಾರಣ ಎಂದು ಹೇಳಿದ್ದರು.
SCROLL FOR NEXT