ರಾಜಕೀಯ

ಬಿಜೆಪಿ ಮುಖಂಡರೊಂದಿಗೆ 3 ಕಾಂಗ್ರೆಸ್ ಶಾಸಕರು ಮುಂಬೈ ಹೋಟೆಲ್ ನಲ್ಲಿ ವಾಸ್ತವ್ಯ: ಡಿಕೆಶಿ

Nagaraja AB

ಬೆಂಗಳೂರು: ಕೆಲ ಬಿಜೆಪಿಯ ಮುಖಂಡರೊಂದಿಗೆ  ಕಾಂಗ್ರೆಸ್ ಪಕ್ಷದ ಮೂವರು ಶಾಸಕರು ಮುಂಬೈನ ಹೋಟೆಲ್ ನಲ್ಲಿದ್ದು, ಆಪರೇಷನ್ ಕಮಲಕ್ಕೆ ಪ್ರಯತ್ನಿಸಲಾಗುತ್ತಿದೆ  ಎಂದು ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್  ಆರೋಪಿಸಿದ್ದಾರೆ.

ರಾಜ್ಯದಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ. ಕೆಲ ಬಿಜೆಪಿ ಶಾಸಕರು ಹಾಗೂ ನಾಯಕರೊಂದಿಗೆ ಮೂವರು ಕಾಂಗ್ರೆಸ್ ಪಕ್ಷ ಶಾಸಕರು ಮುಂಬೈನ ಹೋಟೆಲ್ ನಲ್ಲಿದ್ದಾರೆ. ಎಷ್ಟು ಕೋಟಿ ರೂ. ಆಮಿಷವೊಡ್ಡಲಾಗಿದೆ ಎಂಬುದು ನಮಗೆ ಗೊತ್ತಿದೆ ಎಂದರು.

ಬಿಜೆಪಿಯ  ಸಂಚಿನ ಬಗ್ಗೆ  ಎಲ್ಲಾ ಶಾಸಕರೊಂದಿಗೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿ ಕಾಯ್ದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.  ಒಂದು ವೇಳೆ ನಾನು ಅವರ ಸ್ಥಾನದಲ್ಲಿದ್ದರೆ, 24 ಗಂಟೆಯೊಳಗೆ ಅದನ್ನು ಬಹಿರಂಗಪಡಿಸುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಈ ಬೆಳವಣಿಗೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಗೊತ್ತಿದೆ. ಆದಾಗ್ಯೂ, ಬಿಜೆಪಿ ಈ ಕಾರ್ಯದಲ್ಲಿ ಯಶಸ್ಸು ಸಾಧಿಸಲ್ಲ ಎಂದರು. ಮಕರ ಸಂಕ್ರಾಂತಿ ನಂತರ ಯಾವ ಕ್ರಾಂತಿಯೂ ಉಂಟಾಗಲ್ಲ, ಅದು ಅಂದುಕೊಂಡಷ್ಟು ಸುಲಭವೂ ಅಲ್ಲ, ಪ್ರತಿಪಕ್ಷ ಬಿಜೆಪಿಯ ಕುತಂತ್ರ ಎಲ್ಲವೂ ಗೊತ್ತಿದೆ  ಎಂದರು.

ಈ ವಿಚಾರದಲ್ಲಿ ದಿನೇಶ್ ಗುಂಡೂರಾವ್ ನೀಡಿರುವ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಎಸಿಬಿ ಹಾಗೂ ಆದಾಯ ತೆರಿಗೆ ಇಲಾಖೆ ನಡೆ ಕುತೂಹಲ ಮೂಡಿಸಿದೆ. ಕಾಂಗ್ರೆಸ್  ತೊರೆದು ಬಿಜೆಪಿ ಸೇರ್ಪಡೆಯಾಗುವಂತೆ ಆಮಿಷವೊಡುತ್ತಿರುವ ಬಗ್ಗೆ ಶಾಸಕರು ದೂರು ನೀಡುತ್ತಿದ್ದಾರೆ ಎಂದು ಡಿ. ಕೆ. ಶಿವಕುಮಾರ್ ತಿಳಿಸಿದರು.

SCROLL FOR NEXT