ರಾಜಕೀಯ

ಶಾಸಕ ಗಣೇಶ್ ಉಚ್ಛಾಟನೆಗೆ ಆನಂದ್ ಸಿಂಗ್ ಕುಟುಂಬಸ್ಥರ ಪಟ್ಟು, ಮನವೊಲಿಕೆಗೆ ಕೈ ನಾಯಕರ ಸರ್ಕಸ್

Srinivasamurthy VN
ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಮದ್ಯದ ಬಾಟಲಿಯಿಂದ ಹಲ್ಲೆ ನಡೆಸಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮರ್ಯಾದೆ ಹರಾಜು ಹಾಕಿದ ಕಂಪ್ಲಿ ಶಾಸಕ ಗಣೇಶ್ ಪಕ್ಷದಿಂದಲೇ ಉಚ್ಚಾಟನೆಯಾಗುವ ಸಾಧ್ಯತೆಯಿದೆ.
ಈ ಬಗ್ಗೆ ಆನಂದ್ ಸಿಂಗ್ ಕುಟುಂಬಸ್ಥರು ಪಟ್ಟು ಹಿಡಿದಿದ್ದು, ಒಂದು ವೇಳೆ ಪಕ್ಷ ಗಣೇಶ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲರಾದರೆ ತಾವು ಕಾನೂನು ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಗಣೇಶ್ ವಿರುದ್ಧ ಕ್ರಮ ಕೈಗೊಳ್ಳಿ ಅಥವಾ ದೂರಿಗೆ ಅವಕಾಶ ಕೊಡಿ ಎಂದು ಆನಂದ್ ಸಿಂಗ್ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಕುಟುಂಬಸ್ಥರು ಪಟ್ಟು ಹಿಡಿಯುತ್ತಿದ್ದಂತೆ ಅವರ ಮನವೊಲಿಕೆಗೆ ಕೈ ನಾಯಕರು ಭಾನುವಾರ  ರಾತ್ರಿಯಿಂದ ಸರ್ಕಸ್ ಆರಂಭಿಸಿದ್ದಾರೆ.
ದೂರು, ತನಿಖೆ ಎಂದು ಹೋದರೆ ಎಲ್ಲರಿಗೂ ಮುಜುಗರ ಆಗುತ್ತದೆ ಎಂದು ಹೇಳಿ ಅನಂದ್ ಸಿಂಗ್ ಜೊತೆ ಕಾಂಗ್ರೆಸ್ ನಾಯಕರು ಚರ್ಚಿಸಿದ್ದಾರೆ. ಆದರೆ ಕುಟುಂಬದವರು ದೂರು ದಾಖಲಿಸಲೇಬೇಕು. ಗಣೇಶ್ ಮೇಲೆ ಕಾನೂನು ರೀತಿಯ ಕ್ರಮಕ್ಕೆ ಆಗ್ರಹಿಸಿದ್ದಾರೆ. ಹೀಗಾಗಿ ಕುಟುಂಬದವರ ಮನವೊಲಿಸಲು ಕೈ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ. ಅಲ್ಲದೆ ತಡರಾತ್ರಿಯವರೆಗೂ ಆಸ್ಪತ್ರೆಯಲ್ಲಿಯೇ ಇದ್ದು ಕೈ ನಾಯಕರು ಆನಂದ್ ಸಿಂಗ್ ಕುಟುಂಬಸ್ಥರ ಮನವೊಲಿಕೆಗೆ ಯತ್ನಿಸಿದ್ದಾರೆ ಎಂದೂ ವರದಿಯಾಗಿದೆ.
SCROLL FOR NEXT