ರಾಜಕೀಯ

ಸಿದ್ದರಾಮಯ್ಯನವರಿಗೆ ಬುದ್ಧಿ ಭ್ರಮಣೆಯಾಗಿದೆಯಾ?; ಕೆ ಎಸ್ ಈಶ್ವರಪ್ಪ ಪ್ರಶ್ನೆ

Sumana Upadhyaya

ವಿಜಯಪುರ: ಆಪರೇಷನ್ ಕಮಲದ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರು ಈ ಹಿಂದೆ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಹೋಗಲು ಎಷ್ಟು ಹಣ ಪಡೆದಿದ್ದರು ಎಂಬುದನ್ನು ಬಹಿರಂಗಪಡಿಸಲಿ, ಕಾಂಗ್ರೆಸ್ ನಾಯಕರಾದ ಕೆ ಸಿ ವೇಣುಗೋಪಾಲ್ ಮತ್ತು ದಿನೇಶ್ ಗುಂಡೂರಾವ್ ಕಾಗದದ ಹುಲಿ ಇದ್ದಂತೆ ಎಂದು ಬಿಜೆಪಿ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ಟೀಕಿಸಿದ್ದಾರೆ.

ಸಿದ್ದಗಂಗಾ ಶ್ರೀಗಳ ಅಂತ್ಯಕ್ರಿಯೆಯಲ್ಲಿ ಯಡಿಯೂರಪ್ಪ ರಾತ್ರಿಯಿಡೀ ಕುಳಿತರೂ ಅವರಿಗೆ ಭಾರತರತ್ನ ಕೊಡಿಸಲು ಆಗಲಿಲ್ಲ ಎಂದು ಸಿದ್ದರಾಮಯ್ಯನವರು ಟೀಕಿಸಿದ್ದಾರೆ. ಶವದೊಂದಿಗೆ ರಾಜಕೀಯ ಮಾಡುವ ಸಿದ್ದರಾಮಯ್ಯನವರು ಖಂಡಿತಾ ಉದ್ದಾರ ಆಗುವುದಿಲ್ಲ.

ಸಮ್ಮಿಶ್ರ ಸರ್ಕಾರದಲ್ಲಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಎಚ್ ಡಿ ರೇವಣ್ಣ ಇಬ್ಬರೂ ಮುಖ್ಯಮಂತ್ರಿಗಳಾಗಿದ್ದಾರೆ. ಅವರಿಗೆ ಬ್ರೇಕ್ ಹಾಕಲು ಕಾಂಗ್ರೆಸ್ ನಿಂದ ಸಾಧ್ಯವಾಗುತ್ತಿಲ್ಲ, ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸರ್ಕಾರದಲ್ಲಿ ದಂಧೆ ನಡೆಯುತ್ತಿದೆ.

ಅಣ್ಣ-ತಮ್ಮ ಇಬ್ಬರೂ ಮುಖ್ಯಮಂತ್ರಿಗಳಂತೆ ವರ್ತಿಸುತ್ತಿದ್ದಾರೆ. ರಾಜ್ಯದಲ್ಲಿ ಆಡಳಿತ ಕುಲಗೆಟ್ಟು ಹೋಗಿದೆ. ರಾಹುಲ್ ಗಾಂಧಿಗೆ ಹೆದರಿ ರಾಜ್ಯ ಕಾಂಗ್ರೆಸ್ ನಾಯಕರು ಸುಮ್ಮನಿದ್ದಾರೆ. ಜೆಡಿಎಸ್ ನವರು 2-3 ಚುನಾವಣೆಗೆ ಆಗುವಷ್ಟು ಹಣ ಮಾಡುತ್ತಿದ್ದಾರೆ.

ಇದುವರೆಗೆ ಯಾವ ಮುಖ್ಯಮಂತ್ರಿಯೂ ಲಫಂಗ ರಾಜಕಾರಣ ಎಂಬ ಪದ ಬಳಕೆ ಮಾಡಿರಲಿಲ್ಲ. ಲಫಂಗ ರಾಜಕಾರಣ ಮಾಡುತ್ತಿರುವವರು ಕಾಂಗ್ರೆಸ್​ನವರೇ ಹೊರತು ಬಿಜೆಪಿಯವರಲ್ಲ. ಆಪರೇಷನ್​ ಕಮಲದ ವದಂತಿಯೆಲ್ಲ ಸುಳ್ಳು. ಸಿದ್ದರಾಮಯ್ಯನವರ ಆರೋಪವನ್ನು ಕೇಳುತ್ತಿದ್ದರೆ ಅವರಿಗೆ ಬುದ್ಧ ಭ್ರಮಣೆಯಾಗಿದೆಯಾ ಎಂಬ ಅನುಮಾನ ಮೂಡುತ್ತದೆ ಎಂದು ಈಶ್ವರಪ್ಪ ಟೀಕಿಸಿದರು.

SCROLL FOR NEXT