ಆನಂದ್ ಸಿಂಗ್ 
ರಾಜಕೀಯ

ಅಧಿಕಾರದ ಆಸೆಯಿಂದಾಗಿ ಮುಖಂಡರಿಂದ ಜಿಂದಾಲ್ ಪರ ವಾದ: ಸಮಿತಿಗೆ ಬರೆದ ಪತ್ರದಲ್ಲಿ ಆನಂದ್ ಸಿಂಗ್ ಆಕ್ಷೇಪ

ಜಿಂದಾಲ್ ಕಂಪನಿಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ 3667.31 ಎಕರೆ ಭೂಮಿ ನೀಡುವುದಕ್ಕೆ ಆಕ್ಷೇಪಣೆ...

ಬೆಂಗಳೂರು: ಜಿಂದಾಲ್ ಕಂಪನಿಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ 3667.31 ಎಕರೆ ಭೂಮಿ ನೀಡುವುದಕ್ಕೆ ಆಕ್ಷೇಪಣೆ ಸಲ್ಲಿಸಿದ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಆನಂದ್ ಸಿಂಗ್, ಸಚಿವ ಸಂಪುಟ ಉಪ ಸಮಿತಿಯ ಅಧ್ಯಕ್ಷ ಹಾಗೂ ಗೃಹ ಸಚಿವ ಎಂ ಬಿ.ಪಾಟೀಲ್ ಅವರಿಗೆ ಪತ್ರ ಬರೆದಿದ್ದಾರೆ.
ಆನಂದ್ ಸಿಂಗ್ ಅವರು ಸೋಮವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಕ್ಕೆ ಜಿಂದಾಲ್ ಕಂಪನಿಗೆ ಸರ್ಕಾರಿ ಭೂಮಿ ನೀಡುವುದು ಕೂಡ ಒಂದು ಕಾರಣ ಎನ್ನಲಾಗಿದೆ.
ಕಂಪನಿಗೆ ಭೂಮಿ ನೀಡುವುದರ ಸಾಧಕ-ಬಾಧಕ ಪರಿಶೀಲಿಸಲು ಸಚಿವ ಸಂಪುಟ ಉಪ ಸಮಿತಿ ರಚಿಸಿರುವುದನ್ನು ತಾನು ಸ್ವಾಗತಿಸುತ್ತೇನೆ. ಸರ್ಕಾರದ ನಿರ್ಧಾರ ಅಥವಾ ಕಾರ್ಖಾನೆಯ ವಿರುದ್ಧವಾಗಲಿ ತಾನು ಇಲ್ಲ. ನಮ್ಮ ಜಿಲ್ಲೆಯ ರೈತರ, ಯುವಕರ ಭವಿಷ್ಯವನ್ನು ಮುಂದೆ ಸಮಿತಿಗೆ ಕೆಲವೊಂದು ಆಕ್ಷೇಪಣೆಗಳನ್ನು ಸಲ್ಲಿಸಿದ್ದೇನೆ ಎಂದು ಜೂನ್ 27ರಂದು ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಜೆಎಸ್‌ಡಬ್ಲ್ಯು ತನ್ನ ಕೈಗಾರಿಕಾ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳಲು ಸ್ಥಳೀಯ ಯುವಕರಿಗೆ ಉದ್ಯೋಗ ಸೃಷ್ಟಿಯ ಆಸೆ ತೋರಿಸಿದೆ. ಸಿಎಸ್ಆರ್ ನಿಧಿಯಿಂದ ಜಿಲ್ಲೆಯ ಅಭಿವೃದ್ಧಿಯಲ್ಲಿ ತಾವು ಸಹ ಭಾಗಿಯಾಗುತ್ತೇವೆ ಎಂದು ನಂಬಿಸಿ, ಸರ್ಕಾರದ ವತಿಯಿಂದ ಅನೇಕ ಸವಲತ್ತುಗಳನ್ನು ಪಡೆದುಕೊಂಡಿದೆ. ಈಗ ಈ ಕಂಪನಿ ಸರ್ಕಾರಿ ಭೂಮಿಯನ್ನು ತಮ್ಮ ಹೆಸರಿನಲ್ಲಿ ಕ್ರಯಕ್ಕೆ ಮಾಡಿಕೊಳ್ಳಲು ಹವಣಿಸುತ್ತಿದೆ. ಇದುವರೆಗೆ ಜಿಂದಾಲ್ ಕಂಪನಿ ಸುಮಾರು 11,000 ಎಕರೆಗಿಂತಲೂ ಹೆಚ್ಚು ಭೂಮಿಯನ್ನು ಸರ್ಕಾರದಿಂದ ಪಡೆದುಕೊಂಡಿದೆ. ಈ ಜಾಗದ ಪ್ರಸ್ತುತ ಸ್ಥಿತಿಗತಿಯನ್ನು ಸಮಿತಿ ಪರಿಶೀಲನೆ ಮಾಡಬೇಕು. ಅದೇ ರೀತಿ 11,000 ಎಕರೆಯಷ್ಟು ಬೃಹತ್ ಭೂಮಿಯನ್ನು ಪಡೆದ ಮೇಲೂ ಪುನಃ 3,667 ಎಕರೆ ಭೂಮಿಯ ಅವಶ್ಯಕತೆ ಏನಿದೆ ಎಂಬುದನ್ನು ಅರಿಯಬೇಕು ಎಂದು ಆನಂದ್ ಸಿಂಗ್ ಪತ್ರದಲ್ಲಿ ತಿಳಿಸಿದ್ದಾರೆ.
3,667 ಎಕರೆ ಭೂಮಿ ಈ 11,000 ಎಕರೆ ಭೂಮಿಯ ಭಾಗವಾಗಿದ್ದಲ್ಲಿ, ಈ ಭೂಮಿಯಲ್ಲಿ ಕಾರ್ಖಾನೆಯವರು ಈವರೆಗೂ ಕೈಗೊಂಡಿರುವ ಕ್ರಮಗಳೇನು ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಒಂದು ವೇಳೆ 3,667 ಎಕರೆ ಭೂಮಿಯಲ್ಲಿ ಅಭಿವೃದ್ಧಿಯಾಗಿದ್ದರೆ ಅದನ್ನು ಶುದ್ಧ ಕ್ರಯಕ್ಕೆ ಪಡೆದುಕೊಳ್ಳುವ ಅನಿವಾರ್ಯತೆ ಏನು ? ಲೀಸ್‌ನಲ್ಲೇ ಮುಂದುವರಿಸಬಹುದಲ್ಲವೇ? ಎಂದು ಪ್ರಶ್ನಿಸಿರುವ ಅವರು, ಯಾವುದೇ ಕಾರಣಕ್ಕೂ ಈ ಭೂಮಿಯನ್ನು ಶುದ್ಧ ಕ್ರಯಕ್ಕೆ ನೀಡದೆ ಲೀಸ್ ಅವಧಿಯಲ್ಲಿಯೇ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಿಂದಾಲ್ ಕಂಪನಿಯವರು ಸರ್ಕಾರದಿಂದ ಪಡೆದ ಭೂಮಿಗಿಂತ ಹೆಚ್ಚು ಭೂಮಿಯನ್ನು ವಶಪಡಿಸಿಕೊಂಡಿದ್ದು, ಈ ಬಗ್ಗೆ ಒಂದು ಸಮಗ್ರ ಸರ್ವೇ ಮಾಡಿಸಬೇಕು. ಈ ವಿಷಯದ ಬಗ್ಗೆಯೂ ಸಹ ಕಾಳಜಿ ವಹಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಪತ್ರದಲ್ಲಿ ಗೃಹ ಸಚಿವರನ್ನು ಒತ್ತಾಯಿಸಿದ್ದಾರೆ.
ಮೈತ್ರಿ ಸರ್ಕಾರ ಈ ನಿರ್ಧಾರದ ಪರವಾಗಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದ್ದು, ವಿಪಕ್ಷಗಳಿಗೆ ಒಂದು ಅಸ್ತ್ರ ಸಿಕ್ಕಂತಾಗಿದೆ. ನಮ್ಮ ಸರ್ಕಾರದ ಕೆಲವು ಹಿರಿಯರು ಈ ಕ್ರಮ ಹಿಂದಿನ ಬಿಜೆಪಿ ಸರ್ಕಾರದ್ದಾಗಿದೆ, ಇದನ್ನು ನಾವು ಜಾರಿ ಮಾಡುತ್ತಿದ್ದೇವೆ ಅಷ್ಟೇ ಎಂದು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿರುವುದು ಬೇಸರದ ಸಂಗತಿ. ನಾಡು, ನುಡಿ, ಜಲ, ಮಣ್ಣಿನ ವಿಷಯದಲ್ಲಿ ನಾವು ಪಕ್ಷಾತೀತವಾಗಿ ನಿಲ್ಲಬೇಕಾಗಿದ್ದು ಅತ್ಯವಶ್ಯಕ ಎಂದು ಅವರು ಹೇಳಿದ್ದಾರೆ.
ನಮ್ಮ ಜಿಲ್ಲೆಯ ಕೆಲವು ಮುಖಂಡರು, ಈ ವಿಷಯದಲ್ಲಿ ನನ್ನ ನಿಲುವನ್ನು ವೈಯಕ್ತಿಕ ನಿಲುವೆಂದು ಬಿಂಬಿಸುತ್ತಿದ್ದು, ಅವರು ತಮ್ಮ ಅಧಿಕಾರ ಉಳಿಸಿಕೊಳ್ಳುವ ಆಸೆಯಿಂದಾಗಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಜಿಂದಾಲ್ ಸಂಸ್ಥೆಯ ಪರವಾಗಿ ಮಾತನಾಡುತ್ತಿರುವುದು ನೋವಿನ ಸಂಗತಿಯಾಗಿದೆ. ಆದರೆ ಅಧಿಕಾರ ಎಂಬುದು ಶಾಶ್ವತವಲ್ಲ. ಜಿಲ್ಲೆಯ ಹಿತದೃಷ್ಟಿಯಿಂದ ಎಲ್ಲರೂ ಪಕ್ಷಾತೀತವಾಗಿ ಜಿಲ್ಲೆಯ ರೈತರ, ಯುವಕರ ಒಟ್ಟಾರೆ ಜಿಲ್ಲೆಯ ನಾಗರಿಕರ ಪರವಾಗಿ ನಿಲ್ಲಬೇಕಾಗಿರುವುದು ಜನಪ್ರತಿನಿಧಿಗಳಾಗಿರುವ ನಮ್ಮ ಆದ್ಯ ಕರ್ತವ್ಯವಾಗಿದೆ.
ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆಯೂ ಸಹ ನಮ್ಮೆಲ್ಲರ ಹೊಣೆಯಾಗಿದೆ. ಈ ಕಾರ್ಖಾನೆಯಿಂದ ಜಿಲ್ಲೆಯಲ್ಲಿ ಈವರೆಗೂ ಆಗಿರುವ ಅನುಕೂಲಗಳಿಗಿಂತ ಅನಾನುಕೂಲಗಳೇ ಹೆಚ್ಚಾಗಿದೆ. ಈ ಕಾರ್ಖಾನೆಯಿಂದಾಗಿ, ಅತಿ ಹೆಚ್ಚು ಬೃಹತ್ ಗಾತ್ರದ 20 ರಿಂದ 40 ಚಕ್ರದ ವಾಹನಗಳು ಬಳ್ಳಾರಿ –ಹೊಸಪೇಟೆ ಹೆದ್ದಾರಿ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಬಳ್ಳಾರಿ-ಹೊಸಪೇಟೆ ಹೆದ್ದಾರಿಯು ಸಂಚಾರಕ್ಕೆ ಯೋಗ್ಯವಲ್ಲದ ರೀತಿಯಲ್ಲಿದೆ. ಪ್ರತಿ ವರ್ಷ ಈ ರಸ್ತೆಯನ್ನು ಪುನರ್ ನಿರ್ಮಾಣ ಮಾಡುವ ಅವಶ್ಯಕತೆ ಈ ಹಿಂದಿನಿಂದಲೂ ಇದೆ. ಇದರಿಂದ ಸರ್ಕಾರದ ಖಜಾನೆಗೆ ನಷ್ಟವಾಗುವ ಸಾಧ್ಯತೆಯೇ ಹೆಚ್ಚು ಎಂದು ಆನಂದ್ ಸಿಂಗ್ ತಿಳಿಸಿದ್ದಾರೆ.
ಈ ಕಾರ್ಖಾನೆ ಹೊರಸೂಸುವ ವಿಷಾನಿಲದಿಂದ ಸುತ್ತಮುತ್ತಲ ನಾಗರಿಕರು ತೀವ್ರ ತೆರನಾದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಅಸ್ತಮಾ ಸೇರಿದಂತೆ ಅನೇಕ ರೀತಿಯ ರೋಗ ರುಜಿನಗಳಿಗೆ ಈಡಾಗುತ್ತಿದ್ದಾರೆ. ಗರ್ಭಿಣಿ ಮಹಿಳೆಯರಂತೂ ಅಂಗವಿಕಲ ಮಕ್ಕಳಿಗೆ ಜನ್ಮನೀಡಿ ಕಾರ್ಖಾನೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಇಂತಹ ಬಹಳಷ್ಟು ಅನಾನುಕೂಲಗಳು ಈ ಕಾರ್ಖಾನೆಯಿಂದ ಆಗಿವೆ. ಯಾವುದೇ ಭೂಮಿಯನ್ನು ಯಾವುದೇ ಕಾರ್ಖಾನೆಗೆ ಲೀಸ್‌ಗೆ ನೀಡುವಂತಹ ಸಂದರ್ಭದಲ್ಲಿ ಯಾವುದೇ ರೀತಿಯ ಸಾಲ ಪಡೆಯಲು ಬ್ಯಾಂಕುಗಳಿಗೆ ಅಡಮಾನ ಇಡಬಾರದು ಎಂಬ ಷರತ್ತು ವಿಧಿಸುವುದು ಸಹ ಸೂಕ್ತವಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.
ಜಿಂದಾಲ್ ವಿಷಯದಲ್ಲಿ ತಮ್ಮ ನಿರ್ಧಾರಕ್ಕೆ ಜಿಲ್ಲೆಯ ಮಾಜಿ ರಾಜ್ಯಸಭಾ ಸದಸ್ಯರೂ ಮಾಜಿ ಶಾಸಕರೂ ಆಗಿರುವ ಅನಿಲ್ ಲಾಡ್ ಸಹ ಸಹಮತ ವ್ಯಕ್ತಪಡಿಸಿ, ತಮ್ಮೊಂದಿಗೆ ನಿಂತಿದ್ದಾರೆ. ಜಿಲ್ಲೆಯ ಅನೇಕ ಸಂಘ, ಸಂಸ್ಥೆಗಳೂ, ಪ್ರಗತಿಪರ ಚಿಂತಕರೂ, ರೈತಾಪಿ ವರ್ಗ ವಿಶೇಷವಾಗಿ ಯುವಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ನಮ್ಮ ಈ ನಿರ್ಧಾರ ಹೋರಾಟದ ಸ್ವರೂಪ ಪಡೆದುಕೊಳ್ಳುವ ಮುನ್ನ ತಾವು ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳುತ್ತೀರಿ ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ತಾವು ಆದಷ್ಟು ಶೀಘ್ರವಾಗಿ ತಮ್ಮ ತಂಡದೊಂದಿಗೆ ಖುದ್ದಾಗಿ ಜಿಲ್ಲೆಗೆ ಮತ್ತು ಕಾರ್ಖಾನೆಗೆ ಭೇಟಿ ನೀಡಿ, ತಾನು ನೀಡಿರುವ ಮಾಹಿತಿಗಳ ಬಗ್ಗೆಯೂ ಸಹ ಸತ್ಯಾಸತ್ಯತೆಗಳನ್ನು ಪರಾಮರ್ಶಿಸಿ, ಜಿಲ್ಲೆಯ ರೈತರು, ಪ್ರಗತಿಪರ ಚಿಂತಕರು, ಬುದ್ಧಿಜೀವಿಗಳು ಹಾಗೂ ಯುವಕರ ಸಭೆಗಳನ್ನು ನಡೆಸಿ ಅವರಿಂದಲೂ ಸಹ ಅಭಿಪ್ರಾಯ ಪಡೆದು ಸೂಕ್ತ ತೀರ್ಮಾನ ಕೈಗೊಂಡು ರಾಜ್ಯ ಮತ್ತು ರಾಷ್ಟ್ರಕ್ಕೆ ಮಾದರಿಯಾಗುವ ಶಿಫಾರಸು ಮಾಡಬೇಕು ಎಂದು ಆನಂದ್ ಸಿಂಗ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದ ದರ್ಶನ್; ನಟನ ವಿರುದ್ಧ ಕೊಲೆ ಆರೋಪ ದಾಖಲಿಸಿದ ಕೋರ್ಟ್

ಜುಬೀನ್ ಗಾರ್ಗ್ ಸಾವು ಅಪಘಾತವಲ್ಲ ಕೊಲೆ: ಅಸ್ಸಾಂ ಸಿಎಂ ಬಿಸ್ವಾ ಶರ್ಮಾ ಆರೋಪಕ್ಕೆ ಸಾಕ್ಷಿ ಕೊಡಿ ಎಂದ ಗೊಗೊಯ್!

ತೆಲಂಗಾಣ ಅಪಘಾತ: ರೈಲು ತಪ್ಪಿದ್ದಕ್ಕೆ ಯಮಸ್ವರೂಪಿ ಬಸ್ ಹತ್ತಿದ ಮೂವರು ಸಹೋದರಿಯರು ದುರಂತ ಸಾವು!

Uttar Pradesh: ಬಾಲಕಿಯ ಭೀಕರ ಹತ್ಯೆ, ಅತ್ಯಾಚಾರ; ಗಂಟಲು ಸೀಳಿ, ಕೈಕಾಲುಗಳು ಮುರಿದು, ಮೂಗಿನಲ್ಲಿ ಮರಳು, ಗೋಂದು ತುಂಬಿದ ರಾಕ್ಷಸರು!

ಪ್ರಧಾನಿ ಮೋದಿ ‘ಅಪಮಾನ ಸಚಿವಾಲಯ’ ಆರಂಭಿಸಲಿ: ಪ್ರಿಯಾಂಕಾ ಹೀಗೆ ಹೇಳಿದ್ಯಾಕೆ?

SCROLL FOR NEXT