ರಾಜಕೀಯ

'ಏಕ ಮಿನಿಟ'...ಬಹುಮತ ಸಾಬೀತುಪಡಿಸಿದರೆ ನಾವೇ ಸರ್ಕಾರ ಬಿಟ್ಟುಕೊಡುತ್ತೇವೆ: ಶೋಭಾಗೆ ಸಿದ್ದು ಸವಾಲ್!

Srinivasamurthy VN
ಬೆಂಗಳೂರು: ಜನಾದೇಶವಿದ್ದರೂ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಕೊಡಲಿಲ್ಲ ಎಂದು ಹೇಳಿದ್ದ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರಿಗೆ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಬಹುಮತ ಸಾಬೀತುಪಡಿಸಿದರೆ ನಾವೇ ಸರ್ಕಾರ ಬಿಟ್ಟುಕೊಡುತ್ತೇವೆ ಎಂದು ಹೇಳಿದ್ದಾರೆ.
ಶಾಸಕ ಆನಂದ್​ ಸಿಂಗ್ ಮತ್ತು ರಮೇಶ್​ ಜಾರಕಿಹೊಳಿ ರಾಜೀನಾಮೆ ವಿಚಾರ ಮೈತ್ರಿ ಸರ್ಕಾರದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಟ್ವೀಟ್​ ಮಾಡಿದ್ದ ಸಿದ್ದರಾಮಯ್ಯ, ಈ ರಾಜೀನಾಮೆಯ ನಾಟಕದ ಸೂತ್ರಧಾರರು ರಾಜ್ಯದ ಬಿಜೆಪಿ ನಾಯಕರು. ಸರ್ಕಾರವನ್ನು ಮುನ್ನಡೆಸಲು ಜನರು ಅವರಿಗೆ ಅವಕಾಶ ಕೊಡಲಿಲ್ಲ. ಹೀಗಾಗಿ, ಅವರು ಹಿಂಬಾಗಿಲ ಮೂಲಕ ಅಧಿಕಾರವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಲ್ಪವಾದರೂ ಸ್ವಾಭಿಮಾನವಿದ್ದರೆ ಕೊಳಕು ರಾಜಕಾರಣ ಮಾಡುತ್ತಿರುವ ರಾಜ್ಯದ ಬಿಜೆಪಿ ನಾಯಕರಿಗೆ ಸಂವಿಧಾನಬದ್ಧವಾಗಿ ನಡೆದುಕೊಳ್ಳಲು ಸೂಚಿಸಲಿ ಎಂದು ಆಕ್ರೋಶ ಹೊರಹಾಕಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಬಿಜೆಪಿ ಹಿರಿಯ ನಾಯಕಿ ಶೋಭಾ ಕರಂದ್ಲಾಜೆ ಅವರು, 105 ಸ್ಥಾನಗಳನ್ನು ಪಡೆದಿದ್ದ ಬಿಜೆಪಿಯ ಮುಂದೆ 78 ಸ್ಥಾನ ಪಡೆದಿದ್ದ ಕಾಂಗ್ರೆಸ್​ ಮತ್ತು 37 ಸ್ಥಾನಗಳನ್ನು ಪಡೆದಿದ್ದ ಜೆಡಿಎಸ್​ ಸೇರಿ ಅಪವಿತ್ರ ಮೈತ್ರಿ ಮಾಡಿಕೊಂಡರು. ಬಿಜೆಪಿಗೆ ಜನಾದೇಶವಿದ್ದರೂ ಅದರ ವಿರುದ್ಧವಾಗಿ ಹೋಗಿ ಸರ್ಕಾರ ರಚಿಸಿದರು ಎಂದು ಟೀಕಿಸಿದ್ದರು. 
ಇದೀಗ ಶೋಭಾ ಕರಂದ್ಲಾಜೆ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, 'ನನಗೆ ತಿಳಿದಿರುವ ಪ್ರಕಾರ ಕರ್ನಾಟಕದಲ್ಲಿ ಯಾವುದೇ ಪಕ್ಷ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಲು 113 ಸ್ಥಾನಗಳನ್ನು ಗೆಲ್ಲಲೇಬೇಕೇ ವಿನಃ 105 ಅಲ್ಲ. 'ಏಕ್​ ಮಿನಿಟ್​' ನಿಮ್ಮ ಕೀಳು ರಾಜಕೀಯದಿಂದ ಬಿಡುವು ಮಾಡಿಕೊಂಡು ಪ್ರಜಾಪ್ರಭುತ್ವದ ಗಣಿತವನ್ನು ಕಲಿಯಿರಿ. ಒಂದು ವೇಳೆ 105 ಸ್ಥಾನಗಳಿಂದ ಸರ್ಕಾರವನ್ನು ರಚಿಸಬಹುದು ಎಂಬ ವಿಶ್ವಾಸ ನಿಮಗಿದ್ದರೆ ರಾಜ್ಯಪಾಲರಿಗೆ ನಿಮ್ಮ ಬಹುಮತ ಸಾಬೀತುಪಡಿಸಿ. ನಿಮ್ಮ ಮನವಿ ಸ್ವೀಕೃತವಾದರೆ ನಾವು ಖುಷಿಯಿಂದಲೇ ಸರ್ಕಾರವನ್ನು ಬಿಟ್ಟುಕೊಡುತ್ತೇವೆ ಎಂದು ವ್ಯಂಗ್ಯವಾಡಿದ್ದಾರೆ.
SCROLL FOR NEXT