ರಾಜಕೀಯ

ಅತೃಪ್ತ ಶಾಸಕರು ತಂಗಿರುವ ಮುಂಬೈ ಹೋಟೆಲ್ ಮುಂದೆ ಕಾಂಗ್ರೆಸ್ ಪ್ರತಿಭಟನೆ

Lingaraj Badiger
ಮುಂಬೈ: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನ ಸೊಫಿಟೆಲ್‌ ಹೊಟೇಲ್‌ನಲ್ಲಿ ತಂಗಿರುವ ಅತೃಪ್ತ ಶಾಸಕರ ವಿರುದ್ಧ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ಭಾನುವಾರ ಬೃಹತ್‌ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆ ವಿಧಾನಸಭೆ ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದ ಬಳಿಕ ವಿಶೇಷ ವಿಮಾನದ ಮೂಲಕ ಮುಂಬೈಗೆ ತೆರಳಿದ ಕಾಂಗ್ರೆಸ್ ಮತ್ತು ಜೆಡಿಎಸ್‌ ನ 10 ಶಾಸಕರ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕರಾದ ಮೊಹಮ್ಮದ್ ಆರೀಫ್ ನಸೀಮ್ ಖಾನ್, ಏಕನಾತ್ ಗಾಯಕ್ವಾಡ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆಯಲ್ಲಿ ಹೊಟೇಲ್‌ಗೆ ಪೊಲೀಸ್‌ ಬಿಗಿ ಭದ್ರತೆ ಒದಗಿಸಲಾಗಿದೆ. ಹೊಟೇಲ್‌ ಒಳಗೆ ಹೊಟೇಲ್‌ನ ಸಿಬಂದಿ ಭದ್ರತೆ ಕೈಗೊಂಡಿದ್ದು, ಹೊರಗೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಹೊಟೇಲ್‌ಗೆ ಶಾಸಕರ ಆಪ್ತರಾಗಿರುವ ಕೆಲ ಬಿಜೆಪಿ ಮತ್ತು ಕಾಂಗ್ರೆಸ್‌ ಮುಖಂಡರು ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ರಾಜೀನಾಮೆ ನೀಡಿರುವ ಕಾಂಗ್ರೆಸ್‌ ಶಾಸಕರಾದ ರಮೇಶ್‌ ಜಾರಕಿಹೊಳಿ, ಬೈರತಿ ಬಸವರಾಜ್‌, ಎಸ್‌.ಟಿ.ಸೋಮ ಶೇಖರ, ಬಿ.ಸಿ.ಪಾಟೀಲ್‌, ಮಹೇಶ್‌ ಕುಮಟಳ್ಳಿ, ಪ್ರತಾಪಗೌಡ ಪಾಟೀಲ್‌, ಶಿವರಾಮ್‌ ಹೆಬ್ಟಾರ್‌ ಅವರು ಹೊಟೇಲ್‌ನಲ್ಲಿದ್ದಾರೆ.
ಇತ್ತ ಬೆಂಗಳೂರಿನ ಕೆಪಿಸಿಸಿ ಕಚೇರಿಯ ಎದುರೂ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ರೆಬೆಲ್‌ ಶಾಸಕರು ರಾಜೀನಾಮೆ ವಾಪಾಸ್‌ ಪಡೆಯಲು ಆಗ್ರಹಿಸಿದ್ದಾರೆ.
SCROLL FOR NEXT