ರಾಜಕೀಯ

ಶಾಸಕರನ್ನು ಬೆದರಿಸಿ, ಹೆದರಿಸಿ ಸೆಳೆಯುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ಆರೋಪ

Sumana Upadhyaya
ಬೆಂಗಳೂರು: ಅನೇಕರು ವರ್ಷಾನುಗಟ್ಟಲೆ ಕಾಂಗ್ರೆಸ್ ನಲ್ಲಿದ್ದವರೂ ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆ ಕೊಟ್ಡವರನ್ನು ಎಷ್ಟರ ಮಟ್ಟಿಗೆ ಮನವೊಲಿಸಲು ಯಶಸ್ವಿಯಾಗುತ್ತೇವೆಯೋ ನೋಡಬೇಕು. ಕೆಲವರನ್ನು ಮುಂಬೈಗೆ ಕರೆದುಕೊಂಡು ಹೋಗಲಾಗಿದ್ದು, ಇನ್ನು ಕೆಲವರನ್ನು ದೆಹಲಿಗೆ ಕರೆದುಕೊಂಡು ಹೋಗಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿಸುವ ಕೆಲಸ ನಡೆಯುತ್ತಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಮೈತ್ರಿ ಸರ್ಕಾರ ಮುಂದುವರಿಯಬೇಕು. ಇವೆಲ್ಲ ನಮ್ಮನ್ನು ವಿಭಜಿಸಲು ಸುಳ್ಳು ಸುದ್ದಿಗಳನ್ನು ಮಾಧ್ಯಮಗಳಿಗೆ ನೀಡಲಾಗುತ್ತಿದೆಯಷ್ಟೆ, ಸರ್ಕಾರ ಮುರಿಯಲು ಯಾರಿಗೂ ಮನಸ್ಸಿಲ್ಲ ಎಂದರು.
ರಾಜೀನಾಮೆ ಕೊಟ್ಟ ಶಾಸಕರಲ್ಲಿ ಎಷ್ಟು ಜನ ಪುನರ್ ವಿಚಾರ ಮಾಡಿ ರಾಜೀನಾಮೆ ಹಿಂತೆಗೆದುಕೊಳ್ಳುತ್ತಾರೆ ಎಂ ದು ನಾಡಿದ್ದು 12ರಂದು ಅಸೆಂಬ್ಲಿಯಲ್ಲಿ ಗೊತ್ತಾಗಲಿದೆ. ಎಷ್ಟು ಜನ ಅಸೆಂಬ್ಲಿಯಲ್ಲಿ ಸೇರ್ತಾರೆ, ಯಾರು ವಿಪ್ ಉಲ್ಲಂಘಿಸುತ್ತಾರೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ.
ಇಂದು ರಾಜೀನಾಮೆ ಕೊಟ್ಟವರು ಮತ್ತು ನೀಡಲು ಮುಂದಾಗಿರುವವರು ಅನೇಕ ಕಾರಣಗಳನ್ನು ನೀಡುತ್ತಾರೆ, ಇವರಲ್ಲಿ ಹತ್ತಾರು ವರ್ಷ ಕಾಂಗ್ರೆಸ್ ಪಕ್ಷಕ್ಕಾಗಿ ನಿಸ್ಪಕ್ಷಪಾತವಾಗಿ ದುಡಿದವರು ಇದ್ದಾರೆ,ಹೀಗಿರುವಾಗ ಇವರ ಮನವೊಲಿಸಿ ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೇವೆ ಎಂಬುದನ್ನು ನೋಡಬೇಕಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ನನಗೆ ಅನಿಸಿದ ಮಟ್ಟಿಗೆ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ವಿಶ್ವಾಸ ಇಲ್ಲ, ಯಾವಾಗಲೂ ಕೂಡ ಚುನಾಯಿತ ಸರ್ಕಾರಗಳಿಗೆ ಅದರಲ್ಲೂ ಬಿಜೆಪಿಯೇತರ ಸರ್ಕಾರಗಳನ್ನು ಗುರಿಯಾಗಿಟ್ಟುಕೊಂಡು ಬರುತ್ತಿದ್ದಾರೆ.ಪ್ರಾಂತೀಯ ಪಕ್ಷಗಳಿಗೆ ಮತ್ತು ರಾಷ್ಟ್ರೀಯ ಪಕ್ಷಗಳನ್ನು ಗುರಿಯಾಗಿಟ್ಟುಕೊಂಡು ಶಾಸಕರನ್ನು ಸೆಳೆದುಕೊಳ್ಳುವ ಪ್ರಯತ್ನ ನಿರಂತರವಾಗಿ ಕೇಂದ್ರದ ಬಿಜೆಪಿ ನಾಯಕರು ಮಾಡುತ್ತಿದ್ದಾರೆ.
 ಸುಮಾರು 13-14 ರಾಜ್ಯಗಳಲ್ಲಿ ಬಿಜೆಪಿಯೇತರ ಶಾಸಕರನ್ನು ಪಕ್ಷ ತೊರೆಯುವಂತೆ ಮಾಡಿದ್ದಾರೆ. ಚುನಾಯಿತ ಸರ್ಕಾರಗಳನ್ನು ರಾಜ್ಯಗಳಲ್ಲಿ ಅಸ್ಥಿರತೆ ಉಂಟುಮಾಡಿ ಅಲ್ಲಿ ಶಾಸಕರನ್ನು ಬೆದರಿಸಿ, ಹೆದರಿಸಿ ಕೇಂದ್ರ ಸರ್ಕಾರದ ಕಾನೂನಿನಡಿಯಲ್ಲಿ ಒತ್ತಡದಲ್ಲಿ ಶಾಸಕರನ್ನು ಸೆಳೆದು ವಿರುದ್ಧ ಪಕ್ಷಗಳನ್ನು ದುರ್ಬಲಗೊಳಿಸಬೇಕೆಂದು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ತಮ್ಮನ್ನು ಮುಖ್ಯಮಂತ್ರಿ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆಯಲ್ಲ ಎಂದು ಕೇಳಿದಾಗ ಅದು ನನಗೆ ಗೊತ್ತಿಲ್ಲ ಎಂದರು.
ಹಿರಿಯ ನಾಯಕ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ಬಗ್ಗೆ ಕೇಳಿದಾಗ, ರಾಮಲಿಂಗಾ ರೆಡ್ಡಿಯವರು ಹಿರಿಯ ನಾಯಕರು, ಕಾಂಗ್ರೆಸ್ ನಾಯಕ, ಬೆಂಗಳೂರಿನಲ್ಲಿ ಸುದೀರ್ಘ ವರ್ಷಗಳಿಂದ ಕಾಂಗ್ರೆಸ್ ನ ಕೋಟೆಯನ್ನು ಹಿಡಿದಿಟ್ಟುಕೊಂಡಿದ್ದಾರೆ. ಅವರ ಬೇಡಿಕೆಗಳೇನು, ಸಮಸ್ಯೆಗಳೇನು ಎಂದು ತಿಳಿದುಕೊಂಡು ಅದಕ್ಕೆ ನಾವೇನು ಮಾಡಬಹುದು ಎಂದು ನೋಡೋಣ ಎಂದು ಹೇಳಿದರು. 
SCROLL FOR NEXT