ರಾಜಕೀಯ

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರುತ್ತೇನೆ: ರೋಷನ್ ಬೇಗ್

Lingaraj Badiger
ಬೆಂಗಳೂರು: ದೋಸ್ತಿ ಸರ್ಕಾರಕ್ಕೆ ಮತ್ತೊಂದು ಶಾಕ್ ನೀಡಿರುವ ಕಾಂಗ್ರೆಸ್‍ನಿಂದ ಅಮಾನತುಗೊಂಡಿರುವ ಮಾಜಿ ಸಚಿವ, ಹಾಲಿ ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರುವುದಾಗಿ ಸೋಮವಾರ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ನನ್ನನ್ನು ನಡೆಸಿಕೊಂಡ ರೀತಿಯಿಂದಾಗಿ ನನಗೆ ನೋವಾಗಿದೆ. ಹೀಗಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರುತ್ತೇನೆ ಎಂದು ರೋಷನ್ ಬೇಗ್ ಹೇಳಿದ್ದಾರೆ.
ರಾಜ್ಯದಲ್ಲಿ ಪಕ್ಷಕ್ಕೆ ನಾಯಕತ್ವ ಇಲ್ಲ, ಅದು ಸಂಪೂರ್ಣ ವಿಫಲವಾಗಿದೆ. ನಾನು ಮುಂಬೈಗಾಗಲೀ, ಗೋವಾಕ್ಕಾಗಲೀ ಹೋಗುವುದಿಲ್ಲ. ಬೆಂಗಳೂರಿನಲ್ಲೇ ಇರುತ್ತೇನೆ. ಆದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಬೇಗ್ ತಿಳಿಸಿದ್ದಾರೆ.
ಕಾಂಗ್ರೆಸ್ ನನ್ನನ್ನು ಈಗಾಗಲೇ ಅಮಾನುತು ಮಾಡಿದೆ. ಅಂದು ನಾನು ಆಡಿದ್ದ ಮಾತುಗಳೇ ದೊಡ್ಡ ಅಪರಾಧವಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದ 14 ಸಾವಿರಕ್ಕೂ ಹೆಚ್ಚು ಮತಗಳ ಲೀಡ್ ಬಂದಿದೆ. ಬೇರೆ ಯಾವ ಕ್ಷೇತ್ರದ ಅಭ್ಯರ್ಥಿಯೂ ಈ ಕೆಲಸವನ್ನು ಮಾಡಲಿಲ್ಲ. ಕೋಲಾರದಲ್ಲಿ ದಲಿತ ನಾಯಕನನ್ನು ಸೋಲಿಸುತ್ತೇವೆ ಎಂದು ನಮ್ಮ ಪಕ್ಷದ ಶಾಸಕರೇ ಹೇಳಿದ್ದರು. ಇತ್ತ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಪರ ಕಾಂಗ್ರೆಸ್ ನಾಯಕರು ಪ್ರಚಾರ ನಡೆಸಿದರು. ಅಂತವರ ವಿರುದ್ಧ ಪಕ್ಷ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಬಡಪಾಯಿಯಾದ ನನ್ನ ಮೇಲೆ ಮಾತ್ರ ಕ್ರಮ ಕೈಗೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
SCROLL FOR NEXT