ರಾಜಕೀಯ

ಬಿಜೆಪಿ ನಾಯಕನ ಜತೆ ಮುಂಬೈನಿಂದ ಗೋವಾದತ್ತ ಪ್ರಯಾಣ ಬೆಳೆಸಿದ ರೆಬಲ್ ಶಾಸಕರು

Lingaraj Badiger
ಮುಂಬೈ: ಮೈತ್ರಿ ಸರ್ಕಾರ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್​-ಜೆಡಿಎಸ್ ನ ಅತೃಪ್ತ ಶಾಸಕರು ಮುಂಬೈನ ಸೋಫಿಟೆಲ್‌ ಹೋಟೆಲ್‌ನಿಂದ ಗೋವಾದತ್ತ ಪ್ರಯಾಣ ಬೆಳಸಿದ್ದಾರೆ.
ಕಳೆದ ಶನಿವಾರದಿಂದ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನ ಸೋಫಿಟೆಲ್‌ ಹೋಟೆಲ್‌ನಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ನ 13 ಶಾಸಕರು ಹಾಗೂ ಓರ್ವ ಪಕ್ಷೇತರ ಶಾಸಕನನ್ನು ಮುಂಬೈನಿಂದ ಗೋವಾಗೆ ಶಿಫ್ಟ್ ಮಾಡಲಾಗುತ್ತಿದೆ.
ಮುಂಬೈ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮೋಹಿತ್ ಭಾರತೀಯ ಅವರು 14 ರೆಬಲ್ ಶಾಸಕರನ್ನು ಖಾಸಗಿ ಬಸ್ ನಲ್ಲಿ ಗೋವಾಗೆ ಕರೆದೊಯ್ಯುತ್ತಿದ್ದಾರೆ.
ಬಂಡಾಯ ಶಾಸಕರು ಮುಂಬೈನಿಂದ ಗೋವಾಗೆ ತೆರಳುತ್ತಿದ್ದು, ನಾಳೆ ಬೆಳಗ್ಗೆ ಪಣಜಿ ತಲುಪಲಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಸಚಿವ ಡಿಕೆ ಶಿವಕುಮಾರ್ ಅವರು ಅತೃಪ್ತ ಶಾಸಕರ ಮನವೊಲಿಸಿಲು ಮುಂಬೈಗೆ ಆಗಮಿಸುತ್ತಿರುವ ಮಾಹಿತಿಯ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರನ್ನು ಮುಂಬೈನಿಂದ ಗೋವಾಗೆ ಶಿಫ್ಟ್ ಮಾಡುತ್ತಿದೆ ಎನ್ನಲಾಗಿದೆ.
ಕಾಂಗ್ರೆಸ್‌ನ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ ಪಾಟೀಲ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ‌, ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್, ಮಹಾಲಕ್ಷೀ‌ ಲೇಔಟ್ ಶಾಸಕ ಗೋಪಾಲಯ್ಯ, ಹುಣಸೂರು ಶಾಸಕ ಹೆಚ್.ವಿಶ್ವನಾಥ್ ಹಾಗೂ ಕೆ.ಆರ್‌ ಪೇಟೆ ಶಾಸಕ ನಾರಾಯಣ ಗೌಡ ಅವರು ಕಳೆದ ಶನಿವಾರ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ರಾಜಪಾಲರ ಭೇಟಿ ಬಳಿಕ ರಾಜಭವನದಿಂದ ಎಚ್‌ಎಎಲ್‌ ವಿಮಾನ ನಿಲ್ದಾಣದ ಮೂಲಕ ಮುಂಬೈಗೆ ತೆರಳಿದ್ದರು. ಇಂದು ಪಕ್ಷೇತರ ಶಾಸಕ ನಾಗೇಶ್ ಹಾಗೂ ಆರ್ ಶಂಕರ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳಿ ರೆಬಲ್ ಶಾಸಕರ ತಂಡ ಸೇರಿಕೊಂಡಿದ್ದಾರೆ.
SCROLL FOR NEXT