ನವದೆಹಲಿ: ಕರ್ನಾಟಕದಲ್ಲಿನ ಪ್ರಸ್ತುತ ರಾಜಕೀಯ ಬಿಕ್ಕಟ್ಟಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸೂತ್ರದಾರ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಆರೋಪಿಸಿದ್ದಾರೆ.
ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಕುಟುಂಬದ ಯಾವೊಬ್ಬ ಸದಸ್ಯರು ಮುಖ್ಯಮಂತ್ರಿ ಆಗಲು ಬಿಡದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದಲ್ಲಿ ಪರ್ಯಾಯ ಶಕ್ತಿಯಾಗಿ ಬೆಳೆಯದಂತೆ ಜಿ. ಪರಮೇಶ್ವರ್ ಅವರಿಗೆ ಅಡ್ಡಿ ಮಾಡುತ್ತಿದ್ದಾರೆ. ಇದೇ ಕಾರಣದಿಂದಾಗಿ ಕರ್ನಾಟಕದಲ್ಲಿ ಪ್ರಸ್ತುತ ರಾಜಕೀಯ ಬಿಕ್ಕಟ್ಟು ತಲೆದೋರಿದೆ ಎಂದು ಸುದ್ದಿಗಾರರಿಗೆ ಜೋಷಿ ಹೇಳಿದ್ದಾರೆ.
ಆದರೆ, ಈಗಿನ ಪರಿಸ್ಥಿತಿ ಸಿದ್ದರಾಮಯ್ಯ ಅವರ ಕೈ ಮೀರಿ ಹೋಗಿದೆ. ಅತೃಪ್ತ ಶಾಸಕರು ಮುಂಬೈನಲ್ಲಿದ್ದು , ಬೆಂಗಳೂರಿಗೆ ಬರುವುದಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಮರಳುವ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದಾರೆ. ಇದೀಗ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಬಿಜೆಪಿ ದೂಷಿಸಲು ಆರಂಭಿಸಿದ್ದಾರೆ. ಇದು ಖಂಡನಾರ್ಹವಾದದ್ದು, ಸಿದ್ದರಾಮಯ್ಯ ಸ್ವಾರ್ಥದಿಂದಾಗಿ ಕುಮಾರಸ್ವಾಮಿ ಸರ್ಕಾರಕ್ಕೆ ಅಪಾಯ ಎದುರಾಗಿದೆ ಎಂದು ಆರೋಪಿಸಿದರು.
ರಾಜಕೀಯ ಬಿಕ್ಕಟ್ಟು ತಲೆದೋರುವಲ್ಲಿ ಬಿಜೆಪಿ ಯಾವುದೇ ಪಾತ್ರ ವಹಿಸಿಲ್ಲ. ಒಂದು ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮಸ್ಯೆ ಬಗೆಹರಿಸಿಕೊಂಡರೆ ಬಿಜೆಪಿಗೆ ಏನು ತೊಂದರೆ ಇಲ್ಲ . ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ ಬಳಿಕ ಆ ಪಕ್ಷದಲ್ಲಿ ರಾಜೀನಾಮೆ ಪರ್ವ ಆರಂಭವಾಗಿದೆ. ಇದರಿಂದಾಗಿಯೇ ಕರ್ನಾಟಕದಲ್ಲೂ ಇಂತಹ ರಾಜಕೀಯ ಬಿಕ್ಕಟ್ಟು ತಲೆದೋರಿದೆ ಎಂದು ಜೋಷಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics