ರಾಜಕೀಯ

8 ರೆಬಲ್ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಕಾಂಗ್ರೆಸ್‌ ದೂರು

Lingaraj Badiger
ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ‌ ನೀಡುವ ಮೂಲಕ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಎಂಟು ಶಾಸಕರ ಸದಸ್ಯತ್ವ ಅನರ್ಹಗೊಳಿಸುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಕಾಂಗ್ರೆಸ್ ದೂರು ನೀಡಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಚಿವ ಕೃಷ್ಣ ಬೈರೇಗೌಡ ಅವರು ಮಂಗಳವಾರ ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರಿಗೆ ದೂರು ನೀಡಿದರು.
ವಿಜಯನಗರ ಶಾಸಕ ಆನಂದ್ ಸಿಂಗ್ ಹಾಗೂ ಬಿ.ಟಿ.ಎಂ.ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ಅವರನ್ನು ಹೊರತುಪಡಿಸಿ ಉಳಿದ ಶಾಸಕರ ವಿರುದ್ಧ ಕಾಂಗ್ರೆಸ್ ದೂರು ನೀಡಿದೆ.
ಕಾಂಗ್ರೆಸ್​​​ ಪಕ್ಷದ ಶಾಸಕರಾದ ಪ್ರತಾಪ್‍ಗೌಡ ಪಾಟೀಲ್, ಬಿ.ಸಿ.ಪಾಟೀಲ್, ರಾಮೇಶ್ ಜಾರಕಿಹೊಳಿ, ಶಿವರಾಮ್ ಹೆಬ್ಬಾರ್, ಮಹೇಶ್ ಕುಮಟಳ್ಳಿ, ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜ್​​, ಮುನಿರತ್ನ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಅವರನ್ನು ಅನರ್ಹಗೊಳಿಸುವಂತೆ ದೂರು ನೀಡಲಾಗಿದೆ.
ಇನ್ನು ಜೆಡಿಎಸ್ ಪಕ್ಷದಿಂದಲೂ ಪಕ್ಷದ ಶಾಸಕರಾದ ಎಚ್.ವಿಶ್ವನಾಥ್, ಗೋಪಾಲಯ್ಯ, ನಾರಾಯಣಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ. ಕಾಂಗ್ರೆಸ್​​ ಜೊತೆಗೆ ತೆರಳಿದ್ದ ಜೆಡಿಎಸ್​​ ನಾಯಕರು, ಪ್ರತ್ಯೇಕವಾಗಿ ತಮ್ಮ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಶಾಸಕರ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಪ್ರಜಾಪ್ರತಿನಿಧಿ ಕಾಯ್ದೆ 164-1ಬಿ ಅನ್ವಯ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕಾಂಗ್ರೆಸ್ ಸ್ಪೀಕರ್‌ಗೆ ಮನವಿ ಮಾಡಿದೆ. ಸ್ಪೀಕರ್ ತೆಗೆದುಕೊಳ್ಳುವ ಮುಂದಿನ ತೀರ್ಮಾನದ ಮೇಲೆ ಮೈತ್ರಿ ಸರ್ಕಾರದ ಭವಿಷ್ಯ ನಿಂತಿದೆ.
SCROLL FOR NEXT