ರಾಜಕೀಯ

ನಿಯಮಗಳನ್ನು ಪಾಲಿಸದೇ ಶಾಸಕರ ರಾಜೀನಾಮೆ ಅಂಗೀಕರಿಸುವುದಿಲ್ಲ: ಸ್ಪೀಕರ್ ಸ್ಪಷ್ಟನೆ

Nagaraja AB
ಬೆಂಗಳೂರು: ನಿಯಮಗಳನ್ನು ಪಾಲಿಸದೇ ಶಾಸಕರ ರಾಜೀನಾಮೆ ಅಂಗೀಕರಿಸುವುದಿಲ್ಲ  ಎಂದು ಹೇಳುವ ಮೂಲಕ  ಅತೃಪ್ತರ ರಾಜೀನಾಮೆ ಅಂಗೀಕಾರ ಸದ್ಯಕ್ಕಿಲ್ಲ ಎಂದು  ಸ್ವೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಅತೃಪ್ತ ಶಾಸಕರಿಂದ ಮತ್ತೊಮ್ಮೆ ರಾಜೀನಾಮೆ ಪಡೆದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಕುಮಾರ್, ನಾನು ಯಾವುದೇ ಕಾರಣಕ್ಕೂ ವಿಳಂಬ ಮಾಡಿಲ್ಲ. ನಿಯಮಗಳನ್ನು ಪಾಲಿಸಬೇಕಿತ್ತು, ಕ್ರಮಬದ್ಧವಾಗಿಲ್ಲದ 8 ಅತೃಪ್ತ ಶಾಸಕರ ರಾಜೀನಾಮೆಯನ್ನು ಕ್ರಮಬದ್ಧ ರೀತಿಯಲ್ಲಿ ಸಲ್ಲಿಸುವಂತೆ  ತಿಳಿಸಲಾಗಿತ್ತು ಎಂದರು. 
ಸಂವಿಧಾನ ಹಾಗೂ ಜನರ ಹಂಗಿನಲ್ಲಿ ಬದುಕುತ್ತಿದ್ದು, ಯಾವುದೇ ಶಕ್ತಿಗೂ ಬಗ್ಗಲ,   ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ .ಶಾಸಕರ ರಾಜೀನಾಮೆ ಸಂಬಂಧ ನಿರ್ಧಾರ ತಿಳಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇಂದಿನ ಕಲಾಪದ ಇಡೀ ಪ್ರಕ್ರಿಯೆಯನ್ನು ಚಿತ್ರೀಕರಣ  ಹಾಗೂ ದಾಖಲೆಗಳನ್ನು ಸುಪ್ರೀಂಕೋರ್ಟಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಜೀವ ಬೆದರಿಕೆ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವುದಾಗಿ ಕೆಲ ಶಾಸಕರು ಹೇಳಿದ್ದಾರೆ. ನಮ್ಮ ಬಳಿ ಕೇಳಿಕೊಂಡರೆ ರಕ್ಷಣೆ ನೀಡುವುದಾಗಿ ಅವರಿಗೆ ಹೇಳಿದ್ದೇನೆ. ಕೇವಲ 3 ದಿನ ವಿಳಂಬವಾಗಿದೆ. ಅಷ್ಟಕ್ಕೆ ಭೂಕಂಪವಾದ ರೀತಿಯಲ್ಲಿ ಅವರು ವರ್ತಿಸುತ್ತಿದ್ದಾರೆ ಎಂದು ರಮೇಶ್ ಕುಮಾರ್ ಕಿಡಿಕಾರಿದರು.
ಅತೃಪ್ತ ಶಾಸಕರು ಇಂದು ಸಲ್ಲಿಸಿರುವ ರಾಜೀನಾಮೆ ಪತ್ರಗಳನ್ನು ರಾತ್ರಿಯಲ್ಲೇ ಪರಿಶೀಲಿಸಲಾಗುವುದು, ವಿಚಾರಣೆ ನಡೆಸಿದ ಬಳಿಕ ತಮ್ಮ ನಿರ್ಧಾರವನ್ನು ತಿಳಿಸಲಾಗುವುದು ಎಂದು ರಮೇಶ್ ಕುಮಾರ್ ಹೇಳಿದರು.
SCROLL FOR NEXT