ರಾಜಕೀಯ

ಅತೃಪ್ತ ಶಾಸಕರ ರಾಜಿನಾಮೆ; ಮಂಗಳವಾರಕ್ಕೆ ಅರ್ಜಿ ವಿಚಾರಣೆ, ಯಥಾಸ್ಥಿತಿ ಮುಂದುವರಿಕೆಗೆ 'ಸುಪ್ರೀಂ' ಸೂಚನೆ

Srinivasamurthy VN
ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರಕ್ಕೆ ಕುತ್ತು ತಂದಿದ್ದ ಅತೃಪ್ತ ಶಾಸಕರ ರಾಜಿನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ ನೀಡಿ, ಮಂಗಳವಾರಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.
ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ರಮೇಶ್ ಕುಮಾರ್ ಅವರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ ಆರಂಭವಾಗಿದೆ. ನಿನ್ನೆ ನಡೆದ ವಿಚಾರಣೆಯಲ್ಲಿ ಸ್ಪೀಕರ್ ನಿನ್ನೆಯೇ ರಾಜೀನಾಮೆ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಬೇಕು ಮತ್ತು ಆ ಬಗ್ಗೆ ನ್ಯಾಯಾಲಯಕ್ಕೆ ವರದಿ ನೀಡಬೇಕು ಎಂದು ಕೋರ್ಟ್​ ಸೂಚನೆ ನೀಡಿತ್ತು. ಆದರೆ, ಸ್ಪೀಕರ್ ಅವರು ಅತೃಪ್ತರ ರಾಜೀನಾಮೆ ಸ್ವೀಕರಿಸಿ, ಅಂತಿಮ ತೀರ್ಮಾನಕ್ಕೆ ಕಾಲಾವಕಾಶದ ಅವಶ್ಯಕತೆ ಇದೆ ಎಂದು ಹೇಳಿದ್ದರು. 
ಅದರಂತೆ ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗಗೊಯ್ ನೇತೃತ್ವದ ತ್ರಿ ಸದಸ್ಯ ಪೀಠ, ಪ್ರಸ್ತುತ ಈ ಸಂದರ್ಭದಲ್ಲಿ ಅರ್ಜಿ ಕುರಿತಂತೆ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಇಂತಹುದೇ ನಿರ್ಣಯ ಕೈಗೊಳ್ಳಿ ಎಂದು ಸೂಚಿಸಲು ಸಾಧ್ಯವಿಲ್ಲ. ಆ ಅಧಿಕಾರ ತಮ್ಮದಲ್ಲ. ಪ್ರಸ್ತುತ ರಾಜಿನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ರಮೇಶ್ ಕುಮಾರ್ ಇನ್ನೂ ನಿರ್ಣಯ ಕೈಗೊಂಡಿಲ್ಲ. ಅವರು ನಿರ್ಣಯ ಕೈಗೊಂಡ ಬಳಿಕ ಅದು ಸರಿಯೋ ಅಥವಾ ತಪ್ಪೋ ಎಂದು ಪರಿಶೀಲಿಸಬಹುದು. ಹೀಗಾಗಿ ಈ ನಿಟ್ಟಿನಲ್ಲಿ ಯಥಾಸ್ಥಿತಿ ಮುಂದುವರೆಸಬೇಕು ಎಂದು ಕೋರ್ಟ್ ಅರ್ಜಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.
ಇನ್ನು ಅತೃಪ್ತ ಶಾಸಕರ ಪರ ಹಿರಿಯ ವಕೀಲಮುಕುಲ್ ರೋಹಟಗಿ ವಾದ ಮಂಡಿಸಿದ್ದು, ಸ್ಪೀಕರ್ ಪರವಾಗಿ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು. ಅಂತೆಯೇ ಸಿಎಂ ಎಚ್ ಡಿ ಕುಮಾರ ಸ್ವಾಮಿ ಅವರ ಪರವಾಗಿ, ವಕೀಲ ರಾಜೀವ್ ಧವನ್ ಅವರು ವಾದ ಮಂಡಿಸುತ್ತಿದ್ದಾರೆ.
SCROLL FOR NEXT