ರಾಜಕೀಯ

ವಿಶ್ವಾಸಮತ ಯಾಚನೆ ಹಿನ್ನಲೆ ಕಾಂಗ್ರೆಸ್ ಶಾಸಕರಿಗೆ ಮತ್ತೊಮ್ಮೆ ವಿಪ್ ಜಾರಿ

Lingaraj Badiger
ಬೆಂಗಳೂರು: ವಿಧಾನ ಮಂಡಲ ಅಧಿವೇಶನ ಆರಂಭಕ್ಕೂ ಮುನ್ನ ಸದನದಲ್ಲಿ ಭಾಗವಹಿಸುವಂತೆ ಅತೃಪ್ತ ಶಾಸಕರಿಗೆ ವಿಪ್ ಜಾರಿಯಾಗಿತ್ತು. ಈಗ ವಿಶ್ವಾಸಮತ ಯಾಚನೆ ಹಿನ್ನಲೆಯಲ್ಲಿ ಗುರುವಾರ ಕಲಾಪದಲ್ಲಿ ಭಾಗಿಯಾಗುವಂತೆ ಮತ್ತೊಮ್ಮೆ ವಿಪ್ ಜಾರಿ ಮಾಡಲಾಗಿದೆ ಎಂದು ವಿಧಾನಸಭೆ ಆಡಳಿತಪಕ್ಷದ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ಹೇಳಿದ್ದಾರೆ.
ಪ್ರಕೃತಿ ರೆಸಾರ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಎಲ್ಲಾ ನಾಯಕರ ಜೊತೆ ಚರ್ಚಿಸಿ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದ್ದು, ಶಾಸಕರ ಮನೆಗಳಿಗೆ ವಿಪ್ ತಲುಪಿಸಲಾಗುತ್ತದೆ. ನಾಳೆ ಸದನದಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಿ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಶಾಸಕರ ರಾಜೀನಾಮೆ ವಿಚಾರದಲ್ಲಿ ಸುಪ್ರಿಂಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ. ಸಭಾಧ್ಯಕ್ಷರಿಗೆ ನಿರ್ದೇಶನ ಮಾಡುತ್ತಿಲ್ಲ ಎಂದು ಕೋರ್ಟ್ ತಿಳಿಸಿದೆ. ನಾವು ಸಭಾಧ್ಯಕ್ಷರ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಹಸ್ತಕ್ಷೇಪ ಮಾಡುವುದಿಲ್ಲ. ನ್ಯಾಯ ಮತ್ತು ಸತ್ಯದ ಮೇಲೆ ನಮಗೆ ನಂಬಿಕೆಯಿದೆ. ಗುರುವಾರ ಸದನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಹುಮತ ಸಾಬೀತು ಪಡಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ರಾಜೀನಾಮೆ ನೀಡಿರುವ ಶಾಸಕರು ಪಕ್ಷದ ಚಿಹ್ನೆ ಮೇಲೆ ಗೆಲುವು ಸಾಧಿಸಿ ಶಾಸಕರಾಗಿದ್ದಾರೆ. ಅವರ ಗೆಲುವಿನಲ್ಲಿ ಪಕ್ಷದ ಕಾರ್ಯಕರ್ತರ ಶ‍್ರಮವಿದೆ. ಕಾರ್ಯಕರ್ತರ ಶ್ರಮ ಹೋರಾಟದಿಂದ ಅವರು ಗೆದ್ದು ಬಂದಿದ್ದಾರೆ ಎಂದರು.
ಪಕ್ಷದ ನಾಯಕರು ಅತೃಪ್ತ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಶಾಸಕರು ವಾಪಸ್ ಬರುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಖಂಡ್ರೆ ತಿಳಿಸಿದರು.
SCROLL FOR NEXT