ರಾಜಕೀಯ

ಸಚಿವ ರಹೀಂ ಖಾನ್ ಗೆ ಬಿಜೆಪಿ ಆಮಿಷ ಒಡ್ಡಿದೆ- ಈಶ್ವರ್ ಖಂಡ್ರೆ ಆರೋಪ

Nagaraja AB
ಬೆಂಗಳೂರು: ಕುದುರೆ ವ್ಯಾಪಾರದ ಬಗ್ಗೆ ರಾಜ್ಯಪಾಲರು ಪ್ರಸ್ತಾಪಿಸಿದ್ದಾರೆ ಆದರೆ ಮೈತ್ರಿ ಸರ್ಕಾರದ ಸಚಿವ ರಹೀಂಖಾನ್ ಗೂ ಬಿಜೆಪಿ ಆಮಿಷ ಒಡ್ಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬೆಂಗಳೂರಿನಲ್ಲಿಂದು ಆರೋಪಿಸಿದರು.
ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಬಿಜೆಪಿ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಸರ್ಕಾರದಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದರು.
ಕಾಂಗ್ರೆಸ್ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗುವುದಿಲ್ಲ ಆದರೂ ಪದೇ ಪದೇ ಒತ್ತಡ ಹೇರುತ್ತಲೇ ಇದ್ದಾರೆ. ಕೆಲವರನ್ನು ರಾಜೀನಾಮೆ ಕೊಡಿಸಿದ್ದಾರೆ. ಇನ್ನಷ್ಟು ಶಾಸಕರನ್ನು ರಾಜೀನಾಮೆ ಕೊಡಿಸುವ ಪ್ರಯತ್ನ ಮುಂದುವರೆಸಿದ್ದಾರೆ ಎಂದು ಆರೋಪಿಸಿದರು.
ಕ್ಷೇತ್ರದ ಜನತೆ ಪಕ್ಷದ ಅಭ್ಯರ್ಥಿ ಮೇಲೆ ವಿಶ್ವಾಸ ಇಟ್ಟು ಗೆಲ್ಲಿಸಿದ್ದಾರೆ ಜನರ ನಂಬಿಕೆಯನ್ನು ಕಳೆದುಕೊಳ್ಳಬೇಡಿ, ಸೋಮವಾರ ನಡೆಯಲಿರುವ ವಿಶ್ವಾಸಮತ ಯಾಚನೆ ವೇಳೆ ಸದನಕ್ಕೆ ಹಾಜರಾಗಿ ಮೈತ್ರಿ ಸರ್ಕಾರವನ್ನು ಬೆಂಬಲಿಸಿ ಎಂದು ಅತೃಪ್ತ ಶಾಸಕರಲ್ಲಿ ಮನವಿ ಮಾಡಿಕೊಂಡರು.
ಮುಂಬೈನಲ್ಲಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಬಿಜೆಪಿ ಒತ್ತೆಯಾಳುಗಳ ರೀತಿ ನಡೆಸಿಕೊಳ್ಳುತ್ತಿದೆ. ನಮ್ಮ ಶಾಸಕರು ಭಯ ಮತ್ತು ಹೆದರಿಕೆಗೆ ಒಳಗಾಗಬಾರದು ಎಂದು ಈಶ್ವರ್ ಖಂಡ್ರೆ ಹೇಳಿದರು.
SCROLL FOR NEXT