ರಾಜಕೀಯ

ವಿಶ್ವಾಸಮತ ಯಾಚನೆ ವಿಳಂಬ ಮಾಡಿದರೆ ಪ್ರಜಾತಂತ್ರಕ್ಕೆ ದ್ರೋಹ ಬಗೆದಂತೆ - ಯಡಿಯೂರಪ್ಪ

Nagaraja AB
ಬೆಂಗಳೂರು : ವಿಶ್ವಾಸಮತ ಯಾಚನೆಗೆ ನಾಳೆ ಸಮಯ ನಿಗದಿಯಾಗಿದ್ದು,ಇನ್ನೂ ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಒಂದು ವೇಳೆ ವಿಳಂಬ ಮಾಡಿದರೆ ಅದು ಪ್ರಜಾತಂತ್ರ ವ್ಯವಸ್ಥೆಗೆ ದ್ರೋಹ ಬಗೆದಂತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನ ಧವಳಗಿರಿ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೀಗ ಎಲ್ಲರ ಗಮನ ಸುಪ್ರೀಂಕೋರ್ಟ್ ನತ್ತ ನೆಟ್ಟಿದೆ. ನಾಳೆ ಸುಪ್ರೀಂಕೋರ್ಟ್ ಯಾವ ತೀರ್ಪು ನೀಡಲಿದೆ ಎಂಬುದನ್ನು ಎಲ್ಲರೂ ಕಾಯುತ್ತಿದ್ದಾರೆ.ಈಗಾಗಲೇ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಅತೃಪ್ತ ಶಾಸಕರನ್ನು ಸದನಕ್ಕೆ ಹಾಜರಾಗುವಂತೆ ಒತ್ತಾಯ ಮಾಡುವಂತಿಲ್ಲ ಎಂದು ಹೇಳಿದೆ. ಕುಮಾರಸ್ವಾಮಿ ಅನಗತ್ಯ ವಿಳಂಬ ಮಾಡದೆ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಮುಗಿಸಬೇಕು ಎಂದು ಹೇಳಿದರು.
ಸೋಮವಾರ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಮುಗಿಸುವುದಾಗಿ ಸ್ಪೀಕರ್ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಕೂಡಾ ಇದಕ್ಕೆ ಒಪ್ಪಿದ್ದಾರೆ. ಇನ್ನೂ ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಒಂದು ವೇಳೆ ನಾಳೆಯೂ ವಿಳಂಬ ಮಾಡಿದರೆ ಅದು ಪ್ರಜಾತಂತ್ರಕ್ಕೆ ಮಾಡಿದ ದ್ರೋಹವಾಗುತ್ತದೆ. ನಾವು ನಾಳೆಯವರೆಗೂ ಕಾದು ನೋಡುತ್ತೇವೆ ಎಂದು ತಿಳಿಸಿದರು.
ಅತೃಪ್ತ ಶಾಸಕರ ವಿರುದ್ಧ ವಿಪ್ ಜಾರಿ ಮಾಡಿದರೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ, ನಾಳೆ ಸಂಜೆಯೊಳಗೆ ಎಲ್ಲವೂ ಮುಗಿಯುವ ಭರವಸೆ ಇದೆ. ಈಗಲಾದರೂ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ನೀಡಿ, ಹೊಸ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದರು. 
SCROLL FOR NEXT