ರಾಜಕೀಯ

ಬಿಜೆಪಿ ತೀವ್ರ ಆತುರದಲ್ಲಿದೆ, ಎಲ್ಲವೂ ಸೋಮವಾರ ಕೊನೆಗೊಳ್ಳಲಿದೆ- ಡಿಕೆ ಶಿವಕುಮಾರ್

Nagaraja AB
ಬೆಂಗಳೂರು: ವಿಶ್ವಾಸಮತ ನಿರ್ಣಯ  ಮತ ಹಾಕುವ ವಿಚಾರದಲ್ಲಿ ಆಡಳಿತಾರೂಢ ಮೈತ್ರಿ ಸರ್ಕಾರದ ನಾಯಕರು ಹಾಗೂ ಬಿಜೆಪಿ ನಡುವಣ ವಾಕ್ ಸಮರ ನಡೆಯುತ್ತಿದೆ.  
ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕುವ ಮುನ್ನ ಸಮಗ್ರ ಚರ್ಚೆ ನಡೆಯಬೇಕೆಂಬುದು ಕಾಂಗ್ರೆಸ್ ಬೇಡಿಕೆಯಾದರೆ, ಪ್ರಕ್ರಿಯೆಯನ್ನು ವಿನಾಕಾರಣ ವಿಳಂಬ ಮಾಡಲಾಗುತ್ತಿದೆ ಎಂಬುದು ಬಿಜೆಪಿಯ ಆರೋಪವಾಗಿದೆ. ಈ ಎಲ್ಲವೂ ಸೋಮವಾರ ಅಂತ್ಯಗೊಳ್ಳಲಿದೆ ಎಂದು ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ರಾಜ್ಯದಲ್ಲಿನ ಪ್ರಸ್ತುತ ರಾಜಕೀಯ ಅಸ್ಥಿರತೆಗೆ ಬಿಜೆಪಿ ಹೊಣೆ. ನಮ್ಮ ಶಾಸಕರನ್ನು ಗನ್ ಪಾಯಿಂಟ್ ನಲ್ಲಿ ಇಟ್ಟಿದ್ದಾರೆ. ಯಾವುದೇ ಚರ್ಚೆ ಇಲ್ಲದೆ ಇಡೀ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾ ಎಂದು  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂದರ್ಶನದಲ್ಲಿ ಅವರು ಪ್ರಶ್ನಿಸಿದರು.
ವಿನಾಕಾರಣ ಚರ್ಚೆಯನ್ನು ಎಳೆಯುತ್ತಿಲ್ಲ. ಪ್ರಕ್ರಿಯೆಯನ್ನು ವಿಳಂಬ ಮಾಡಲು ನಾವು ಪ್ರಯತ್ನಿಸುತ್ತಿಲ್ಲ. ನೆಮ್ಮೆಲ್ಲಾ ಆರೋಪಗಳಿಗೆ ಉತ್ತರಿಸಲಾಗುತ್ತಿದೆ. ಬಿಜೆಪಿಯವರು ತೀವ್ರ ಆತುರದಲ್ಲಿದ್ದಾರೆ. ವಿಶ್ವಾಸಮತ ಸೋಲಿಸುವಷ್ಟ ಸಂಖ್ಯೆ ಹೊಂದಿದ್ದರೆ ಅವರು ಯಾಕೆ  ಈ ರೀತಿಯ ಆತುರ ಪಡುತ್ತಾರೆ ಎಂದು ಪ್ರಶ್ನಿಸಿದರು.
ಬಹುಮತ ಸಾಬೀತುಪಡಿಸುತ್ತೇವೆ ಎಂಬ ವಿಶ್ವಾಸವಿದೆ. ಮುಂಬೈನಲ್ಲಿರುವ ಶಾಸಕರಿಗೆ ಪೋನ್ ನಲ್ಲಿ ಮಾತನಾಡುವುದಕ್ಕೂ ಅವಕಾಶ ನೀಡುತ್ತಿಲ್ಲ. ಅಲ್ಲಿರುವ ಕೆಲ ಶಾಸಕರನ್ನು ಲೊನಾವಾಲಕ್ಕೆ ಸ್ಛಳಾಂತರ ಮಾಡಲಾಗಿದೆ. ಅವರು ಬೆಂಗಳೂರಿಗೆ ಬರುತ್ತಾರೆ ಎಂಬ ವಿಶ್ವಾಸವಿದೆ ಕಾದುನೋಡೋಣ ಎಂದರು.
ಕಾಂಗ್ರೆಸ್ ಬಂಡಾಯ ಶಾಸಕರನ್ನು ಬಿಜೆಪಿಯವರೇ ಮುಂಬೈಗೆ ಕಳುಹಿಸಿರುವ ಬಗ್ಗೆ ನಮ್ಮಲ್ಲಿ ಸೂಕ್ತ ದಾಖಲೆಗಳಿವೆ. ಪೋಟೋಗಳು, ಪ್ರಯಾಣದ ವೆಚ್ಚದ ಮಾಹಿತಿ ಎಲ್ಲವೂ ನಮ್ಮ ಬಳಿ ಇದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ. ಈ ಎಲ್ಲಾ ಅಸ್ಥಿರತೆಗೆ ಬಿಜೆಪಿಯೇ ನೇರ ಕಾರಣ ಬಿಜೆಪಿ ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
SCROLL FOR NEXT