ರಾಜಕೀಯ

ರಾಜಕೀಯ ಅಸ್ಥಿರತೆ: ಕಾಂಗ್ರೆಸ್ ಬಂಡಾಯ ಶಾಸಕರು ಬಂದರೆ ನಾವು ಹೊರಗೆ- ಬಿಜೆಪಿ ಮುಖಂಡರು

Nagaraja AB
ಬೆಳಗಾವಿ: ಕಾಂಗ್ರೆಸ್ ಬಂಡಾಯ ಶಾಸಕರು ಬಿಜೆಪಿ ಸೇರ್ಪಡೆಗೆ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಮುಖಂಡರಿಂದ ಅಸಮಾಧಾನ ವ್ಯಕ್ತವಾಗಿದೆ.
ಬಂಡಾಯ ಕಾಂಗ್ರೆಸ್ ಶಾಸಕರೊಂದಿಗೆ ಸರ್ಕಾರ ರಚನೆಗೆ ಬಿಜೆಪಿ ಮುಖಂಡರು ಮುಂದಾಗಿದ್ದರೆ ಕೆಲ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಾಜಿ ಶಾಸಕರು ಸೇರಿದಂತೆ ಕೆಲ ಬಿಜೆಪಿ ಮುಖಂಡರು ಪಕ್ಷವನ್ನು ತೊರೆಯಲು ನಿರ್ಧರಿಸಿದ್ದು, ಮುಂಬರುವ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕಾಗವಾಡ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕನಾಗಿದ್ದೇನೆ ಮತ್ತು ಮುಂದಿನ ಚುನಾವಣೆಯಲ್ಲೂ ಗೆಲ್ಲುವ ಆಕಾಂಕ್ಷೆ ಹೊಂದಿದ್ದೇನೆ. ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್  ಬಂಡಾಯ ಶಾಸಕ ಶ್ರೀಮಂತ್ ಪಾಟೀಲ್  ಬಿಜೆಪಿಯಿಂದ ಸ್ಪರ್ಧಿಸಿದರೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮಾಜಿ ಬಿಜಿಪಿ ಶಾಸಕ ರಾಜು ಕಾಗೆ ಹೇಳಿದ್ದಾರೆ.
ಗೋಕಾಕ್ ಕ್ಷೇತ್ರದಲ್ಲಿ ಅಶೋಕ್ ಪುಜಾರಿ ನೇತೃತ್ವದಲ್ಲಿನ ಅನೇಕ ಬಿಜೆಪಿ ಮುಖಂಡರು ಜಾರಕಿಹೊಳಿ ಸಹೋದರರೊಂದಿಗೆ ರಾಜಕೀಯ ಸಂಘರ್ಷ ಹೊಂದಿದ್ದಾರೆ. ಕಳೆದ ಎರಡು ಬಾರಿಯ  ಆಸೆಂಬ್ಲಿ ಚುನಾವಣೆಗಳಲ್ಲಿ ಅಶೋಕ್ ಪೂಜಾರಿ ಕಡಿಮೆ ಅಂತರದಿಂದ ರಮೇಶ್ ಜಾರಕಿಹೊಳಿ ವಿರುದ್ಧ ಸೋತಿದ್ದರು. ಬದಲಾದ ರಾಜಕೀಯದಲ್ಲಿ ರಮೇಶ್ ಜಾರಕಿಹೊಳಿ ಬಿಜೆಪಿ ಸೇರುವ ಸಾಧ್ಯತೆ ಇದೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್ ಪುಜಾರಿ, ಕಾಂಗ್ರೆಸ್ ಬಂಡಾಯ ಶಾಸಕರ ಜೊತೆ ಸೇರಿ ಬಿಜೆಪಿ ಸರ್ಕಾರ ರಚನೆಯಾಗುವವರೆಗೂ ಕಾಯುತ್ತೇನೆ. ತದನಂತರ ತಮ್ಮ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದರು.
ಅಥಣಿಯಿಂದ ಬಿಜೆಪಿಯಿಂದ ಮೂರು ಬಾರಿ ಗೆದ್ದಿದ್ದ ಲಕ್ಷ್ಮಣ್ ಸವದಿ ಕೂಡಾ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಸವದಿ ಸೋತಿದ್ದರು. 
ಕಾಂಗ್ರೆಸ್ ಬಂಡಾಯ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಶ್ರೀಮಂತ್ ಪಾಟೀಲ್ ಬಿಜೆಪಿಗೆ ಸೇರ್ಪಡೆಯಾದರೆ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಸಂಖ್ಯೆ 12ಕ್ಕೆ ಏರಿಕೆಯಾದರೆ ಕಾಂಗ್ರೆಸ್ ಶಾಸಕರ ಸಂಖ್ಯೆ 5ಕ್ಕೆ ಇಳಿಯಲಿದೆ.
SCROLL FOR NEXT