ಬೆಂಗಳೂರು: ಸೋಮವಾರ ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡುವುದಾಗಿ ಕಾಂಗ್ರೆಸ್ ನಾಯಕರು, ಸ್ಪೀಕರ್ ರಮೇಶ್ ಕುಮಾರ್ ಭರವಸೆ ನೀಡಿದ್ದಾರೆ, ಅಂದು ವಿಶ್ವಾಸಮತ ಯಾಚಿಸದಿದ್ದಲ್ಲಿ ಮೈತ್ರಿ ನಾಯಕರು ಮತ್ತೊಮ್ಮೆ ವಚನ ಭ್ರಷ್ಟರಾಗುತ್ತಾರೆ ಎಂದು ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ.
ರಮಡ ರೆಸಾರ್ಟ್ ಬಳಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಕಾಂಗ್ರಸ್ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸ್ವೀಕರ್ ರಮೇಶ್ ಕುಮಾರ್ ಸೋಮವಾರ ವಿಶ್ವಾಸ ಮತ ಯಾಚನೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಒಂದು ವೇಳೆ ಮಾತಿಗೆ ತಪ್ಪಿದರೆ ಮತ್ತೊಮ್ಮೆ ವಚನ ಭ್ರಷ್ಟರಾಗುತ್ತಾರೆ. ದೇವೇಗೌಡರ ಕುಟುಂಬ ಅಧಿಕಾರಕ್ಕೆ ಅಂಟಿಕೊಂಡು ಕೂತಿದೆ. ಮೈತ್ರಿ ಉಳಿಸಲು ಸಚಿವ ಡಿ ಕೆ ಶಿವಕುಮಾರ್ ಅವರು ನಾಟಕ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಬಿಜೆಪಿ ಶಾಸಕರನ್ನು ಪ್ರಚೋದನೆ ಮಾಡುವುದೇ ಮೈತ್ರಿ ಸರ್ಕಾರ ನಾಯಕರ ಉದ್ದೇಶವಾಗಿದೆ. ಆದರೆ ನಾವು ಶಿಸ್ತಿನಿಂದ, ಸಂಯಮದಿಂದ ಸದನದಲ್ಲಿದ್ದೇವೆ. ನಾವು ಯಾವ ಅಧಿಕಾರಕ್ಕೂ ಅಂಟಿಕೊಂಡಿಲ್ಲ. ಸರ್ಕಾರ ನಮ್ಮ ಅಪ್ಪನ ಮನೆಯ ಆಸ್ತಿಯೂ ಅಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ವಿಶ್ವಾಸ ಮತ ಯಾಚನೆ ಮಾಡದೆ ಗೂಟ ಹೊಡೆದುಕೊಂಡು ಕುಳಿತಿದ್ದೀರಾ ? ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ಇನ್ನು ಎಷ್ಟು ದಿನ ಅಧಿಕಾರಕ್ಕೆ ಅಂಟಿಕೊಂಡು ಕುಳಿತುಕೊಳ್ಳುತ್ತೀರಾ, ರಾಜೀನಾಮೆ ಕೊಟ್ಟುಹೋಗಿ ಎಂದು ಮುಖ್ಯಮಂತ್ರಿಗೆ ತಿರುಗೇಟು ನೀಡಿದರು.
ನಮ್ಮ ಮೇಲೆ ಯಾವುದೇ ಒತ್ತಡ ಇಲ್ಲ ಎಂದು ಮುಂಬೈನಲ್ಲಿರುವ ಶಾಸಕರೇ ಸ್ಪಷ್ಟಪಡಿಸಿದ್ದಾರೆ. ಆದರೆ ಸಚಿವ ಡಿ ಕೆ ಶಿವಕುಮಾರ್ ನಾಟಕ ಮಾಡುತ್ತಿದ್ದಾರೆ. ನಮ್ಮ ಮೇಲೆ ಸುಮ್ಮನೆ ಅರೋಪ ಮಾಡುತ್ತಿದ್ದಾರೆ. ಅವರಿಗೆ ಸಂಖ್ಯಾ ಬಲ ಇಲ್ಲ ಎಂದು ಎಲ್ಲರಿಗೂ ಗೊತ್ತು. ಅದಕ್ಕಾಗಿ ಅವರು ಈ ರೀತಿ ಮಾತಾನಾಡಿ ಸದನವನ್ನು ಹಾದಿ ತಪ್ಪಿಸುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.