ರಾಜಕೀಯ

ಅಶ್ಲೀಲ ವಿಡಿಯೋ ಕ್ಲಿಪ್: ವಿಧಾನಸಭೆಯಲ್ಲಿ ಕಣ್ಣೀರು ಹಾಕಿದ ಅರವಿಂದ್ ಲಿಂಬಾವಳಿ

Lingaraj Badiger
ಬೆಂಗಳೂರು: ಅಶ್ಲೀಲ ವಿಡಿಯೋ ಕ್ಲಿಪ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಅವರು ವಿಧಾನಸಭೆಯಲ್ಲಿ ಭಾವುಕರಾಗಿ ಕಣ್ಣೀರ ಹಾಕಿದ ಘಟನೆ ಸೋಮವಾರ ನಡೆಯಿತು.
ಇಂದು ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆಯ ವೇಳೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಅರವಿಂದ್ ಲಿಂಬಾವಳಿ ಅವರದ್ದೆನ್ನಲಾದ ಅಶ್ಲೀಲ ವಿಡಿಯೋ ಬಗ್ಗೆ ಚರ್ಚೆಯಾಗಬೇಕು ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಒತ್ತಾಯಿಸಿದರು. ಇದನ್ನು ನಾವು ತಡೆಯದಿದ್ದರೆ ಮುಂಗೆ ನಮ್ಮ ಬಗ್ಗೆಯೂ ಇಂತಹ ವಿಡಿಯೋಗಳು ಬರಬಹುದು. ಹೀಗಾಗಿ ಈ ಬಗ್ಗೆ ಚರ್ಚೆಯಾಗಬೇಕು ಎಂದರು.
ಈ ವೇಳೆ ಲಿಂಬಾವಳಿ ಅವರನ್ನು ಸಮರ್ಥಿಸಿಕೊಂಡ ಪ್ರತಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರು, ಈ ಬಗ್ಗೆ ಸದನದಲ್ಲಿ ಚರ್ಚಿಸುವುದು ಬೇಡ. ಲಿಂಬಾವಳಿಗೂ ಆ ವಿಡಿಯೋಗೂ ಯಾವುದೇ ಸಂಬಂಧ ಇಲ್ಲ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಅರವಿಂದ ಲಿಂಬಾವಳಿ, ನನ್ನ ಮಾನ ಹರಾಜು ಮಾಡಲು ಕೆಲವರು ಷಡ್ಯಂತ್ರ ನಡೆಸಿದ್ದಾರೆ. ಇಂದು ನನ್ನ ಬಗ್ಗೆ ಆಗಿದೆ. ನಾಳೆ ನಿಮ್ಮ ಬಗ್ಗೆಯೂ ಈ ರೀತಿಯ ಅಪಪ್ರಚಾರ ಆಗುತ್ತದೆ ಎಂದು ಭಾವುಕರಾಗಿ ಕಣ್ಣೀರು ಹಾಕಿದರು. 
ಕೆಲ ದಿನಗಳ ಹಿಂದೆ ಅರವಿಂದ್ ಲಿಂಬಾವಳಿ ಅವರದ್ದೆನ್ನಲಾದ ಅಶ್ಲೀಲ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಫೇಸ್​ಬುಕ್​ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ನಾಯಕ, ಇದು ತನ್ನ ತೇಜೋವಧೆ ಮಾಡಲು ನಡೆದಿರುವ ಪಿತೂರಿ. ತಾನು ರಾಜಕೀಯವಾಗಿ ಬೆಳೆಯದಂತೆ ವಿರೋಧಿಗಳು ಮಾಡಿರುವ ಸುಳ್ಳು ಸೃಷ್ಟಿ ಇದು ಎಂದು ಅರವಿಂದ್ ಲಿಂಬಾವಳಿ ಸ್ಪಷ್ಟಪಡಿಸಿದ್ದರು.
SCROLL FOR NEXT