ಬೆಂಗಳೂರು: ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದ್ದು, ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಿ ಹೊಸ ಸರ್ಕಾರ ರಚಿಸಲಿದೆ ಎಂದು ಬಿಜೆಪಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ಹೇಳಿದ್ದಾರೆ.
ವಿಧಾನಸಭೆಯಲ್ಲಿನ ಬಹುಮತ ಸಾಬೀತು ಪ್ರಕ್ರಿಯೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚಿಸಲು ಇದ್ದ ಎಲ್ಲ ತೊಡಕುಗಳು ನಿವಾರಣೆಯಾಗಿವೆ. ಇದು ಬಿಜೆಪಿಯ 105 ಶಾಸಕರ ವಿಜಯ. ನಾವು ಅತೀ ಶೀಘ್ರದಲ್ಲಿ ಸರ್ಕಾರ ರಚಿಸಿ, ಉತ್ತಮ ಆಡಳಿತ ನೀಡುತ್ತೇವೆ ಎಂದರು.
ಲೋಕಸಭೆಯಲ್ಲಿ ಜನ ಬಿಜೆಪಿಗೆ ಆಶೀರ್ವಾದ ಮಾಡಿದಂತೆ, ಈಗ ರಾಜ್ಯದಲ್ಲಿಯೂ ಆಶೀರ್ವಾದ ಲಭಿಸಿದೆ. ನಮ್ಮ ಶಾಸಕರು ಯಾವುದೇ ಸಮಯದಲ್ಲಿ, ಎಲ್ಲಿಯೂ ಚಲಿಸದೆ ನಮ್ಮ ಜೊತೆಗಿದ್ದು ಈ ಗೆಲುವು ಲಭ್ಯವಾಗುವಂತೆ ಮಾಡಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು ಎಂದು ಮಾಧುಸ್ವಾಮಿ ಹೇಳಿದರು.
ಅತೃಪ್ತ ಶಾಸಕರು ಹೆಚ್ಚು ದಿನ ಬಿಜೆಪಿಯೊಂದಿಗೆ ಉಳಿಯಲ್ಲ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಸಿದ್ಧರಾಮಯ್ಯ ಕೂಡ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದವರು. ರಾಜಕೀಯದಲ್ಲಿ ಇವೆಲ್ಲವೂ ಸಹಜ. ಯಾರು ಸಂಪನ್ನರಲ್ಲ. ಇದೊಂದು ಚದುರಂಗದಾಟ. ಇಲ್ಲಿ ಎಲ್ಲವೂ ನಡೆಯುತ್ತದೆ. ನಡೆಸಿಕೊಂಡು ಹೋಗಬೇಕು, ಹೋಗುತ್ತೇವೆ ಎಂದರು.
ಕಲಾಪದಲ್ಲಿ ನಮ್ಮ ಶಿಸ್ತು, ಗಾಂಭೀರ್ಯಕ್ಕೆ ರಾಜ್ಯಾದ್ಯಂತ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳು ಕೂಡ ವಾಸ್ತವ ಸಂಗತಿಯನ್ನು ತೋರಿಸಿ ತಮ್ಮ ಕರ್ತವ್ಯ ಮೆರೆದಿವೆ ಎಂದು ಶ್ಲಾಘಿಸಿದರು.
ರಾಜ್ಯದಲ್ಲಿ ಬರಗಾಲ ನಿವಾರಣೆಗೆ ಪ್ರಾಥಮಿಕ ಆದ್ಯತೆ ನೀಡುತ್ತೇವೆ. ಶಾಶ್ವತ ಬರಪರಿಹಾರ ಯೋಜನೆಗಳನ್ನು ರೂಪಿಸುತ್ತೇವೆ. ನೀರಾವರಿ ಸಮಸ್ಯೆಗಳನ್ನು ನಿವಾರಿಸುತ್ತೇವೆ. ಮುಂದಿನ ದಿನಗಳ್ಲಲಿ ಜನ ಮೆಚ್ಚುವ ಆಡಳಿತ ನಿಡುತ್ತೇವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics