ರಾಜಕೀಯ

ಅತೃಪ್ತ ಶಾಸಕರಿಗೆ ಅನರ್ಹತೆ ಎಚ್ಚರಿಕೆ ನೀಡಿದ ಡಿ.ಕೆ.ಶಿವಕುಮಾರ್‌

Srinivasamurthy VN
ಬೆಂಗಳೂರು: ಮಂಗಳವಾರ ಬೆಳಿಗ್ಗೆ 11 ಗಂಟೆ ಒಳಗೆ ಅತೃಪ್ತ ಶಾಸಕರು ಸ್ಪೀಕರ್‌ ಎದುರು ಹಾಜರಾಗಿ ತಮ್ಮ ನಿಲುವು ಸ್ಪಷ್ಟಪಡಿಸದಿದ್ದರೆ ತಮ್ಮ ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳ್ಳಲಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ವಿಧಾನಸಭೆಯಲ್ಲಿ ಸಭಾಧ್ಯಕ್ಷರು ಶಾಸಕಾಂಗ ನಾಯಕರು ತಮ್ಮ ಶಾಸಕರಿಗೆ ವಿಪ್‌ ನೀಡಬಹುದು ಎಂದು ರೂಲಿಂಗ್‌ ನೀಡಿದ್ದಾರೆ. ಇದು ಅತೃಪ್ತ ಶಾಸಕರಿಗೂ ಅನ್ವಯವಾಗಲಿದೆ. ವಿಪ್‌ ಉಲ್ಲಂಘಿಸಿದರೆ ಅಂತಹ ಶಾಸಕರು ತಮ್ಮ ಸದಸ್ಯತ್ವದಿಂದ ಅನರ್ಹಗೊಳ್ಳುತ್ತಾರೆ ಎಂದು ಹೇಳಿದ್ದಾರೆ. 
ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡೂ ಶಾಸಕಾಂಗ ಪಕ್ಷದ ನಾಯಕರು ಅನರ್ಹತೆ ಅರ್ಜಿ ಇತ್ಯರ್ಥವಾಗಬೇಕೆಂದು ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದರು. ಅತೃಪ್ತ ಶಾಸಕರು ಮಂಗಳವಾರ ಬೆಳಿಗ್ಗೆ 11 ಗಂಟೆಯೊಳಗೆ ಬಂದು ತಮ್ಮ ಅಭಿಪ್ರಾಯ ನೀಡಬೇಕು ಎಂದು ಸ್ಪೀಕರ್‌, ಶಾಸಕಾಂಗ ಪಕ್ಷದ ನಾಯಕರಿಗೆ ಸೂಚನೆ ನೀಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.
SCROLL FOR NEXT