ರಾಜಕೀಯ

ವಿಶ್ವಾಸಮತದಲ್ಲಿ ಕುಮಾರಸ್ವಾಮಿಗೆ ಸೋಲು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನ

Srinivas Rao BV
ಬೆಂಗಳೂರು: ಸುದೀರ್ಘ ಚರ್ಚೆಯ ನಂತರ ಜು.23 ರಂದು ವಿಧಾನಸಭೆಯಲ್ಲಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸಮತಯಾಚನೆ ಮಾಡಿದ್ದು, ಫಲಿತಾಂಶದಲ್ಲಿ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ. 
ಸುದೀರ್ಘ ಚರ್ಚೆಯ ನಂತರ ಜು.23 ರಂದು ವಿಧಾನಸಭೆಯಲ್ಲಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸಮತಯಾಚನೆ ಮಾಡಿದ್ದು, ಫಲಿತಾಂಶದಲ್ಲಿ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಸಿಎಂ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ.

ವಿಶ್ವಾಸಮತ ನಿರ್ಣಯದ ಪರವಾಗಿ 99  ಮತಗಳು, ವಿರುದ್ಧವಾಗಿ 105 ಮತಗಳು ದೊರೆಯಿತು. ಸದನದಲ್ಲಿ ಸ್ಪೀಕರ್ ಹೊರತುಪಡಿಸಿ ಒಟ್ಟು 204 ಮಂದಿ ಸದಸ್ಯರು ಹಾಜರಿದ್ದರು. ಈ ಮೂಲಕ ಕಳೆದ ಮೂರು ವಾರಗಳಿಂದ ನಡೆಯುತ್ತಿದ್ದ ಶಾಸಕರ ರಾಜೀನಾಮೆ, ಆಪರೇಷನ್ ಕಮಲ ಕಾರ್ಯಾಚರಣೆ, ರಾಜಕೀಯ ಅನಿಶ್ಚಿತತೆಗೆ ತೆರೆ ಬಿದ್ದಿದ್ದು, ಕುಮಾರಸ್ವಾಮಿ ನೇತೃತ್ವದ 14 ತಿಂಗಳ ಮೈತ್ರಿ ಸರ್ಕಾರ ಪತನಗೊಂಡಿದೆ. 

ವಿಧಾನಸಭೆಯಲ್ಲಿ ಕಳೆದ ಗುರುವಾರ ಕುಮಾರಸ್ವಾಮಿ  ಮಂಡಿಸಿದ್ದ ವಿಶ್ವಾಸಮತ ನಿರ್ಣಯದ ಮೇಲೆ ನಾಲ್ಕು ದಿನಗಳ ಕಾಲ ನಡೆದ ಸುದೀರ್ಘ ಚರ್ಚೆಗೆ ಉತ್ತರ ನೀಡಿದ ಕುಮಾರಸ್ವಾಮಿ, ಬಳಿಕ ವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕುವಂತೆ ಕೋರಿದರು. ಧ್ವನಿಮತದ ನಂತರ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಮತ ವಿಭಜನೆಗೆ ಒತ್ತಾಯಿಸಿದರು. ಬಳಿಕ ಕೋರಂ ಬೆಲ್ ಹೊಡೆದ ನಂತರ ಪರ ವಿರುದ್ಧ ಶಾಸಕರ ತಲೆ ಎಣಿಕೆ ನಡೆಯಿತು. 

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಮಲಿಂಗಾ ರೆಡ್ಡಿ, ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸಿಕೊಂಡಿದ್ದ ಅವರ ಪುತ್ರಿ ಸೌಮ್ಯ ರೆಡ್ಡಿ, ಉಪ ಸಭಾಧ್ಯಕ್ಷ ಎಂ. ಕೃಷ್ಣಾ ರೆಡ್ಡಿ  ಸಹ ಮೈತ್ರಿ ಸರ್ಕಾರದ ಪರವಾಗಿ ಮತ ಚಲಾಯಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಗೆ ಇದೀಗ ಹಾದಿ ಸುಗಮವಾಗಿದೆ.
SCROLL FOR NEXT