ರಾಜಕೀಯ

ಡಿಕೆ ಶಿವಕುಮಾರ್ ಸದನವನ್ನು ಹಾದಿ ತಪ್ಪಿಸುತ್ತಿದ್ದಾರೆ- ಶೆಟ್ಟರ್ ಆರೋಪ

Nagaraja AB
ಬೆಂಗಳೂರು: ಇಂದು ಸಂಜೆ 6 ಗಂಟೆಗೆ ವಿಶ್ವಾಸಮತಯಾಚಿಸುವಂತೆ ರಾಜ್ಯದ ಮೈತ್ರಿ ಸರ್ಕಾರಕ್ಕೆ ಸ್ಪೀಕರ್ ರಮೇಶ್ ಕುಮಾರ್ ಗಡುವು ನೀಡಿರುವಂತೆ ಇಂದು ಸಹ ವಿಧಾನಸಭೆಯಲ್ಲಿ ತೀವ್ರ ರಾಜಕೀಯ ಹೈಡ್ರಾಮ ನಡೆಯುತ್ತಿದೆ. 
ಮೂರನೇ ದಿನವೂ ವಿಶ್ವಾಸಮತ ನಿರ್ಣಯ ಮೇಲಿನ ಚರ್ಚೆ ಮುಂದುವರೆದಿದ್ದು, ಆಡಳಿತಾ ಹಾಗೂ ಪ್ರತಿಪಕ್ಷಗಳ ನಾಯಕರ ನಡುವೆ ವಾಕ್ ಸಮರ ನಡೆಯುತ್ತಿದೆ.
ಚರ್ಚೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್,  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ  ಕಾಂಗ್ರೆಸ್ ಶಾಸಕರ ರಾಜಕೀಯ ಭವಿಷ್ಯವನ್ನು ಬಿಜೆಪಿ ಹಾಳು ಮಾಡುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿ ಆರೋಪ ಮಾಡಿದ ಬಿಜೆಪಿ ಹಿರಿಯ ಮುಖಂಡ ಜಗದೀಶ್ ಶೆಟ್ಟರ್, ಡಿಕೆ ಶಿವಕುಮಾರ್ ಸದನವನ್ನು ಹಾದಿ ತಪ್ಪಿಸುತ್ತಿದ್ದಾರೆ ಎಂದರು.
ಬಂಡಾಯ ಶಾಸಕರು ಈಗಲೂ ಕೂಡಾ ಸದನದ ಸದಸ್ಯರಾಗಿದ್ದರೂ ಡಿಕೆ ಶಿವಕುಮಾರ್ ಅವರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.ರೆಬೆಲ್ ಶಾಸಕರು ಸದನದಲ್ಲಿ ಭಾಗವಹಿಸಬಹುದು ಅಥವಾ ಗೈರಾಗಬಹುದು. ಅದು ಅವರ ವಿವೇಚನೆಗೆ ಬಿಟ್ಟ ವಿಚಾರವಾಗಿದ್ದು, ಯಾರೂ ಕೂಡಾ ಬಲವಂತಪಡಿಸಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದಾಗ್ಯೂ, ಮುಂಬೈನಲ್ಲಿರುವ ಬಂಡಾಯ ಶಾಸಕರನ್ನು ಮನಸನ್ನು ಬದಲಾಯಿಸಲು ಡಿಕೆ ಶಿವಕುಮಾರ್ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಶೆಟ್ಟರ್ ಆರೋಪಿಸಿದರು.
ಶಾಸಕರ ಅನರ್ಹತೆ  ಮತ್ತಿತರ ವಿಚಾರ ಕುರಿತಂತೆ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯಬೇಕಾಗಿದೆ. ಆದಾಗ್ಯೂ, ಡಿಕೆ  ಶಿವಕುಮಾರ್ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಶೆಟ್ಟರ್ ಸದನದಲ್ಲಿ ಟೀಕಿಸಿದರು.
SCROLL FOR NEXT