ರಾಜಕೀಯ

ದೋಸ್ತಿಗೆ ಸಿಗದ ಸಮಾಧಾನ: ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಸುಪ್ರೀಂ ಕೋರ್ಟ್!

Shilpa D
ಬೆಂಗಳೂರು: ವಿಶ್ವಾಸಮತ ಯಾಚನೆ ವಿಳಂಬ ಮಾಡಿಕೊಂಡು ಬರುತ್ತಿದ್ದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ವಿಚಾರಣೆ ನಿರಾಸೆ ತಂದಿದೆ.
ಕರ್ನಾಟಕ ವಿಧಾನಸಭೆಯಲ್ಲಿ ಇಂದು ವಿಶ್ವಾಸಮತ ಯಾಚನೆ ನಿರ್ಣಯ ಪ್ರಕ್ರಿಯೆ ಮುಕ್ತಾಯಗೊಳ್ಳದಿದ್ದರೆ ಈ ಸಂಬಂಧ ಸಲ್ಲಿಸಿರುವ ಅರ್ಜಿಯನ್ನು ನಾಳೆಗೆ ಕೈಗೆತ್ತಿಕೊಳ್ಳುವುದಾಗಿ ಹೇಳಿ ಸುಪ್ರೀಂಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ವಿಶ್ವಾಸಮತ ಪ್ರಕ್ರಿಯೆಯನ್ನು ಇಂದೇ ಪೂರ್ಣಗೊಳಿಸುವಂತೆ ಸ್ಪೀಕರ್‌ ಗೆ ನಿರ್ದೇಶನ ನೀಡುವಂತೆ ಕೋರಿ ಪಕ್ಷೇತರ ಶಾಸಕರಿಬ್ಬರು ಸಲ್ಲಿಸಿದ್ದ ಅರ್ಜಿ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನೇತೃತ್ವದ ಪೀಠದಲ್ಲಿ ಇಂದು ವಿಚಾರಣೆಗೆ ಬಂದಾಗ ಅವರು ಈ ರೀತಿ ಹೇಳಿ ವಿಚಾರಣೆಯನ್ನು ಮುಂದೂಡಿದರು.

ಈ ವೇಳೆ ಅರ್ಜಿದಾರರ ಪರ ವಕೀಲ ಮುಕುಲ್ ರೋಹ್ಟಗಿ, ಸ್ಪೀಕರ್ ಅವರು ವಿಶ್ವಾಸ ಮತ ಯಾಚನೆಯ ಕಲಾಪವನ್ನು ಮುಂದಕ್ಕೆ ಹಾಕುತ್ತಿದ್ದಾರೆ. ಮಧ್ಯರಾತ್ರಿಯಾದರೂ ಇಂದೇ ಮುಗಿಸುತ್ತೇವೆ ಎಂದು ನಿನ್ನೆ ಹೇಳಿದ್ದರು. ಆದರೆ ಕಲಾಪವನ್ನು ಇಂದಿಗೆ ಮುಂದೂಡಿದ್ದಾರೆ ಎಂದು ಹೇಳಿದರು.

ಆಗ ಸ್ಪೀಕರ್ ಪರ ವಕೀಲ ಅಭಿಷೇಕ್ ಸಿಂಘ್ವಿ, ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಪ್ರಗತಿಯಲ್ಲಿದೆ. ಚರ್ಚೆಯ ಕೊನೆಯಲ್ಲಿ ಮತಕ್ಕೆ ಹಾಕಲಾಗುತ್ತದೆ. ಈ ಪ್ರಕ್ರಿಯೆ ಈಗಲೂ ನಡೆಯುತ್ತಿದೆ. ವಿಶ್ವಾಸಮತದಿಂದ ಯಾರಿಗಾದರೂ ತಪ್ಪಿಸಿಕೊಳ್ಳಲು ಸಾಧ್ಯವೆ ?. ಇದನ್ನು ಮಾಡಲೇಬೇಕಾಗುತ್ತದೆ. ಸದನ ಅದನ್ನು ನಿರ್ವಹಿಸುತ್ತದೆ. ಸದನ ನಡೆಯುತ್ತಿರುವಾಗ ಸುಪ್ರೀಂಕೋರ್ಟ್ ಹೇಗೆ ಮಧ್ಯಪ್ರವೇಶಿಸುತ್ತದೆ ? ಎಂದು ಪ್ರಶ್ನಿಸಿದರು.

ಮಾತ್ರವಲ್ಲ ಸದನ ನಡೆಯುತ್ತಿರುವಾಗ ರಾಜ್ಯಪಾಲರು ಹೇಗೆ ಮಧ್ಯದಲ್ಲಿ ನಿರ್ದೇಶನ ನೀಡುತ್ತಾರೆ. ಈ ಸರ್ಕಾರ ಇಂದು ಅಥವಾ ನಾಳೆ ಬಿದ್ದು ಹೋಗಬಹುದು. ಸರ್ಕಾರ ಯಾವಾಗ ಬಿದ್ದರೂ ಅವರಿಗೆ ಏನು ತೊಂದರೆ ? ಎಂದು ಸಿಂಘ್ವಿ ಪ್ರಶ್ನಿಸಿದರು.

ಆಗ ಪೀಠ, ಯಾವಾಗ ವಿಶ್ವಾಸಮತ ಯಾಚನೆ ಕುರಿತ ಮತದಾನ ನಡೆಯಲಿದೆ ಎಂದು ಪ್ರಶ್ನಿಸಿತು. ಇಂದು ಅಥವಾ ನಾಳೆ ವಿಶ್ವಾಸಮತ ಯಾಚನೆ ನಡೆಯಲಿದ ಎಂದು ಸಿಂಘ್ವಿ ಉತ್ತರಿಸಿದರು.

ಆಗ ಪೀಠ, ಸದನದ ವಿಶ್ವಾಸಮತ ಯಾಚನೆ ನೋಡಿಕೊಂಡು ನಾಳೆ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿ ನಾಳೆಗೆ ವಿಚಾರಣೆಯನ್ನು ಮುಂದೂಡಿತು.
SCROLL FOR NEXT