ರಾಜಕೀಯ

ನಮ್ಮ ಶಾಸಕರ ಬೆಂಬಲವಿಲ್ಲದೆ ನೀವು ಸಿಎಂ ಆಗಲು ಸಾಧ್ಯವೆ?: ಬಿಎಸ್ ವೈಗೆ ಸಿದ್ದರಾಮಯ್ಯ ಪ್ರಶ್ನೆ

Lingaraj Badiger
ಬೆಂಗಳೂರು: ರಾಜ್ಯದಲ್ಲಿ ರಾಜಕಾರಣ ವ್ಯಾಪಾರವಾಗಿದೆ. ಬಿಜೆಪಿ ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದೆ. ಆದರೂ ನಮ್ಮ ಅತೃಪ್ತ ಶಾಸಕರಿಗೂ ತಮಗೂ ಸಂಬಂಧ ಇಲ್ಲ ಎಂದು ಹೇಳುತ್ತಿದ್ದಾರೆ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಗೊತ್ತಾಗಲ್ವೆ? ನೇರವಾಗಿ ನಾವೇ ಮಾಡಿದ್ದು ಎಂದು ಹೇಳಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ವಿಧಾನಸಭೆಯಲ್ಲಿ ವಿಶ್ವಾಸಮತದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಮಾಜಿ ಸಿಎಂ, ನಮ್ಮ ಶಾಸಕರ ಬೆಂಬಲ ಇಲ್ಲದೆ ನೀವು ಸಿಎಂ ಆಗಲು ಸಾಧ್ಯವೇ? ಎಂದು ಬಿಎಸ್ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದರು. ಈ ಪಕ್ಷಾಂತರ ಪಿಡುಗಿನ ನಂತರ ರಚನೆಯಾಗುವ ಸರ್ಕಾರ ಸಂಪೂರ್ಣ ಆಡಳಿತ ನಡೆಸಲು ಸಾಧ್ಯವೇ ಇಲ್ಲ. ನಮಗೆ ಈಗ ಆಗಿರುವ ತಂತ್ರ ನಿಮಗೆ ತಿರುಗುಬಾಣವಾಗುತ್ತದೆ. ಯಡಿಯೂರಪ್ಪನವರೇ ನೀವು ಕೂಡ ಸರ್ಕಾರ ರಚಿಸಿದರೆ, ಒಂದು ವರ್ಷ ಕೂಡ ಆಡಳಿತ ನಡೆಸಲು ಸಾಧ್ಯವಿಲ್ಲ ಎಂದರು.
ರಾಜ್ಯದಲ್ಲಿ ಈಗ ವ್ಯಾಪಾರಿ ರಾಜಕಾರಣ ಆಗುತ್ತಿದೆ. ವ್ಯಾಪಾರದಲ್ಲಿ ಎರಡು ರೀತಿ ಇದೆ. ಒಂದು ಹೋಲ್‌ ಸೇಲ್‌ ಮತ್ತು ರೀಟೇಲ್‌. ಆದರೆ ಇಲ್ಲಿ ಹೋಲ್‌ ಸೇಲ್‌ ರೀಟೇಲ್‌ ಮಾಡುತ್ತಿದ್ದರೆ ಪ್ರಜಾತಂತ್ರಕ್ಕೆ ನಾವು ನೀಡುತ್ತಿರುವ ಗೌರವ ಏನು. ಈ ರೀತಿಯ ಹೋಲ್‌ಸೇಲ್‌ ಮಾರಾಟ ನಾಚಿಕೆಗೇಡಿನ ಸಂಗತಿ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರು ಈ ರೀತಿಯ ಪಕ್ಷಾಂತರ ಆಗುತ್ತಿದ್ದರೆ ಪ್ರಜಾಪ್ರಭುತ್ವದಡಿ ಆಯ್ಕೆಯಾಗಿರುವ ಯಾವುದೇ ಸರ್ಕಾರ ಉಳಿಯಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. 
ತಮಿಳುನಾಡಿನಲ್ಲಿ ಶಾಸಕರು ಬೆಂಬಲ ವಾಪಸ್‌ ಪಡೆದ ನಂತರ ರಾಜ್ಯಪಾಲರಿಗೆ ಪತ್ರ ನೀಡಿದ ತಕ್ಷಣ ಅವರನ್ನು ಅನರ್ಹಗೊಳಿಸಲಾಯಿತು. ಸ್ಪೀಕರ್‌ಗೆ ಆ ಪವರ್‌ ಇದೆ. ಈ ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಾಯಿತು. ಪಕ್ಷಾಂತರ ಎಂಬ ರೋಗಕ್ಕೆ ತಕ್ಷಣ ಪರಿಹಾರ ಕಂಡುಹಿಡಿಯಬೇಕಾಗಿದೆ ಎಂದರು.
ಅನರ್ಹ ಮಾಡುವ ಅಧಿಕಾರ ಸ್ಪೀಕರ್‌ಗೆ ಇದೆ. ಈ ವಿಷಯದ ಕುರಿತಾಗಿಯೇ ನಾನು ಕ್ರಿಯಾಲೋಪ ಎತ್ತಿದ್ದು. ಈ ಕುರಿತು ಸ್ಪೀಕರ್‌ ತಮ್ಮ ವಿವೇಚನೆಯನ್ನು ನ್ಯಾಯಯುತವಾಗಿ ಬಳಸಿದ್ದಾರೆ ಎಂದರು.
ವಿಧಾನಸಭೆ ಚುನಾವಣೆ ನಂತರ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರಲಿಲ್ಲ. ಆದರೂ ಬಿಜೆಪಿ ದೊಡ್ಡ ಪಕ್ಷ ಎಂಬ ಕಾರಣಕ್ಕೆ ಯಡಿಯೂರಪ್ಪನವರಿಗೆ ಮೊದಲು ಸರ್ಕಾರ ರಚಿಸಲು ಅವಕಾಶ ನೀಡಲಾಗಿತ್ತು. ಆದರೆ ಅವರು ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದರು. ನಂತರ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚನೆಯಾಯಿತು ಎಂದು ಸಿದ್ದರಾಮಯ್ಯ ಹೇಳಿದರು.
ಜನಾದೇಶ ನಿಮ್ಮ ಪರವಾಗಿ ಬಂದಿಲ್ಲ. ನೀವು ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದೀರಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸರ್ಕಾರ ರಚಿಸುವಷ್ಟು ಜನಾದೇಶ ಇರಲಿಲ್ಲ. ನಮಗೆ ಬಿಜೆಪಿಗಿಂತಲೂ ಕಡಿಮೆ ಸ್ಥಾನ ಬಂದಿದ್ದವು. ಬಿಜೆಪಿಗೆ 104, ನಮಗೆ 70 ಬಂದಿದ್ದವು. ಆದರೆ ಶೇಕಡಾವಾರು ಮತಗಳು ನಮಗೆ 38.14% ಬಂದಿದ್ದವು. ಬಿಜೆಪಿಗೆ 36.34 ಮತಗಳು, ಜೆಡಿಎಸ್‌ಗೆ 18.03 ಮತಗಳು ಬಂದಿದ್ದವು ಎಂದು ಸಿದ್ದರಾಮಯ್ಯ ಸದನಕ್ಕೆ ತಿಳಿಸಿದರು.
SCROLL FOR NEXT