ರಾಜಕೀಯ

ಸಂತೋಷದಿಂದ ಸಿಎಂ ಸ್ಥಾನ ತ್ಯಜಿಸಲು ಸಿದ್ಧ: ಸಿಎಂ ಕುಮಾರಸ್ವಾಮಿ

Lingaraj Badiger
ಬೆಂಗಳೂರು: ರಾಜ್ಯದಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಮಂಗಳವಾರ ನಿರ್ಣಾಯಕ ಘಟ್ಟ ತಲುಪಿದ್ದು, ನಾನು ಸಂತೋಷದಿಂದ ಸಿಎಂ ಸ್ಥಾಮ ತ್ಯಜಿಸಲು ಸಿದ್ಧ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಇಂದು ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ, ವಿಶ್ವಾಸಮತವನ್ನು ವಿಳಂಬ ಮಾಡುವ ಉದ್ದೇಶ ನನಗೆ ಇಲ್ಲ. ಆದರೆ ನಾನು ಏಕೆ ರಾಜೀನಾಮೆ ನೀಡುತ್ತಿಲ್ಲ ಮತ್ತು ಸಿಎಂ ಕುರ್ಚಿಗೆ ಅಂಟಿಕೊಂಡಿದ್ದೇನೆ ಎಂಬುದರ ಬಗ್ಗೆ ಚರ್ಚೆಯಾಗಬೇಕಿದೆ. ಈ ಸಂಬಂಧ ನಾನು ಸ್ಪೀಕರ್ ಮತ್ತು ರಾಜ್ಯದ ಜನತೆಯ ಕ್ಷಮೆಯಾಚಿಸುತ್ತೇನೆ ಎಂದರು.
ನಾನು ಯಾವುದೇ ಕಾರಣಕ್ಕೂ ಓಡಿ ಹೋಗುವುದಿಲ್ಲ. ವಿಶ್ವಾಸಮತಯಾಚನೆ ಮಾಡಿಯೇ ತೀರುತ್ತೇನೆ. ಯಾರಿಗೆ ಬಲ ಇದೆಯೋ ನೋಡೋಣ. ನಾನು ಕದ್ದು ಪಲಾಯನ ಮಾಡಲ್ಲ. ಸುಮ್ಮನೆ ನಮ್ಮನ್ನು ಕೆಣಕಬೇಡಿ. ತಪ್ಪಾಗಿದ್ದರೆ ತಿದ್ದಿಕೊಳ್ಳುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು. 
2018ರಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಾಗ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಬಯಸಿದ್ದೆ. ಆದರೆ ಕಾಂಗ್ರೆಸ್ ನವರು ನೀವೇ ಸಿಎಂ ಆಗಬೇಕು ಎಂದು ಒತ್ತಾಯಿಸಿದರು. ಹೀಗಾಗಿ ನಾನು ಮುಖ್ಯಮಂತ್ರಿಯಾದೆ. 
ನಾನು ರಾಜಕೀಯಕ್ಕೆ ಬಂದಿದ್ದೇ ಅನಿರೀಕ್ಷಿತ. ರಾಜಕೀಯಕ್ಕೆ ಬರಲು ನನಗೆ ಇಷ್ಟವಿರಲಿಲ್ಲ. ನಮ್ಮ ತಂದೆಗೂ ಇಷ್ಟವಿರಲಿಲ್ಲ. ಎಚ್‌ಡಿ ರೇವಣ್ಣಗೆ ನಮ್ಮ ತಂದೆಯ ಆಶೀರ್ವಾದ ನೀಡಿದ್ದರು. ನಮ್ಮ ತಂದೆ ರೈತರಾಗಿ ರೈತರಿಗಾಗಿ ದುಡಿದಿದ್ದಾರೆ. ಹೀಗಾಗಿ ಕೆಲವು ಪುಸ್ತಕದಲ್ಲಿಯೂ ಇದು ಪ್ರಸ್ತಾಪವಾಗಿದೆ. ಎಂದರು. ಆದರೆ 1996ರಲ್ಲಿ ಅನಿವಾರ್ಯ ಕಾರಣಗಳಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದೆ ಎಂದು ಕುಮಾರಸ್ವಾಮಿ ತಿಳಿಸಿದರು. 
ನನ್ನ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ರೈತರ ಸಾಲಮನ್ನಾ ವಿಚಾರದಲ್ಲಿ ಬಿಜೆಪಿಯವರು ಅಪಪ್ರಚಾರ ಮಾಡಿದರು. ಆದರೆ ಈ ವಿಷಯದಲ್ಲಿ ಸ್ಪಷ್ಟವಾಗಿದ್ದೇನೆ. ಸಾಲಮನ್ನಾ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ನೆರವು ನೀಡಲಾಗಿದೆ. ಸಹಕಾರಿ, ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲವನ್ನು ಮನ್ನಾ ಮಾಡಲು ಕ್ರಮ ಕೈಗೊಂಡಿದ್ದೇವೆ ಎಂದರು.
ಈ ಹಿಂದೆ ಬಿಜೆಪಿ ಜತೆ ಸೇರಿಕೊಂಡು ಸರ್ಕಾರ ರಚನೆ ಮಾಡಿದ ನಂತರ 20:20 ತಿಂಗಳು ನಂತರ ಅಧಿಕಾರ ಬಿಟ್ಟುಕೊಡಲು ನಾನು ಸಿದ್ದನಿದ್ದೆ. ಆದರೆ ಯಶವಂತ್ ಸಿನ್ಹಾ, ದೇವೇಗೌಡ ಹಾಗೂ ಕೆಲವು ನಾಯಕರು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಷರತ್ತು ವಿಧಿಸಿದರು. ಆಗ ಅಧಿಕಾರ ನೀಡದಿರುವ ನಿರ್ಧಾರವನ್ನು ಪಕ್ಷ ತೆಗೆದುಕೊಂಡಿತು. ಆದರೆ ನಾನು ವಚನ ಭ್ರಷ್ಟ ಆಗಿರಲಿಲ್ಲ. ಯಡಿಯೂರಪ್ಪನವರೇ ನಿಮ್ಮ ನಾಯಕರು, ಕಾರ್ಯಕರ್ತರಿಗೆ ಹೇಳಿ ನನ್ನನ್ನು ವಚನ ಭ್ರಷ್ಟ ಎನ್ನಬೇಡಿ. ಆದರೂ ನಾನು ಅಧಿಕಾರ ಹಸ್ತಾಂತರ ಮಾಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು. 
SCROLL FOR NEXT