ರಾಜಕೀಯ

ವಕೀಲರೊಂದಿಗೆ ಚರ್ಚಿಸಬೇಕು, ನಮಗೆ ಸಮಯಾವಕಾಶ ನೀಡಿ: ಸ್ಪೀಕರ್ ಗೆ ರೆಬೆಲ್ ಶಾಸಕರ ಮನವಿ

Srinivasamurthy VN
ಮುಂಬೈ: ಹಾಲಿ ಪರಿಸ್ಥಿತಿಯಲ್ಲಿ ರಾಜಿನಾಮೆ ಸಂಬಂಧ ಸ್ಪೀಕರ್ ರಮೇಶ್ ಕುಮಾರ್ ಅವರ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ನಮಗೆ ಮತ್ತಷ್ಟು ಸಮಯಾವಕಾಶ ನೀಡಿ ಎಂದು ಅತೃಪ್ತ ಶಾಸಕರು ಮನವಿ ಮಾಡಿದ್ದಾರೆ.
ಮುಂಬೈನ ರೆಸಾರ್ಟ್ ನಿಂದಲೇ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮನವಿ ಮಾಡಿರುವ ಅತೃಪ್ತ ಶಾಸಕರು, ಕಾನೂನಿನ ಪ್ರಕಾರವೇ ರಾಜಿನಾಮೆ ಬಳಿಕ ಆ ಸಂಬಂಧ ಉತ್ತರಿಸಲು 7 ದಿನಗಳ ಕಾಲಾವಕಾಶವಿದೆ. ಪ್ರಸ್ತುತ ನಾವು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಅನರ್ಹತೆ ವಿಚಾರಕ್ಕೆ ಸಂಬಂಧಿಸಿದಂತೆ ನಾವು ನಮ್ಮ ವಕೀಲರೊಂದಿಗೆ ಚರ್ಚಿಸಬೇಕು. ಹೀಗಾಗಿ ನಮಗೆ ಮತ್ತಷ್ಟು ದಿನಗಳ ಕಾಲ ಸಮಯಾವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.
ಇಂದು ಬೆಳಗ್ಗೆ 11ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರಿಗೆ ಸಮನ್ಸ್ ನೀಡಿದ್ದರು. ಈ ಸಮನ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿರುವ ಅತೃಪ್ತ ಶಾಸಕರು, 'ಯಾವುದೇ ಕಾರಣಕ್ಕೂ ನಾವು ವಿಚಾರಣೆಗೆ ಹಾಜರಾಗುವ ಪ್ರಶ್ನೆಯೇ ಇಲ್ಲ. ಸ್ಪೀಕರ್ ಬೇಕಿದ್ದರೆ ನಮ್ಮನ್ನು ಅನರ್ಹತೆಗೊಳಿಸಲಿ. ನಾವು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡುತ್ತೇವೆ. ಒಂದು ವೇಳೆ ನಾವು ಚುನಾವಣೆಗೆ ನಿಲ್ಲಲಾಗದಿದ್ದರೂ, ನನ್ನ ಬೆಂಬಲಿಗರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಳ್ಳುತ್ತೇವೆ ಎಂದು ಸವಾಲೆಸೆದಿದ್ದಾರೆ.
ಇದೇ ವೇಳೆ ನಾವು ಅನಿವಾರ್ಯ ಕಾರಣಗಳಿಂದ ಹೊರಗಡೆ ಇದ್ದು, ನಮಗೆ ನಾಲ್ಕು ವಾರಗಳ ಕಾಲ ಸಮಯ ಬೇಕು. ಈ ಕುರಿತಂತೆ ಸ್ಪೀಕರ್ ಅವರ ಬಳಿಯೂ ಮನವಿ ಮಾಡಿದ್ದೇವೆ ಎಂದು ಅತೃಪ್ತ ಶಾಸಕರು ಹೇಳಿದ್ದಾರೆ.
SCROLL FOR NEXT