ರಾಜಕೀಯ

ಮೈತ್ರಿ ಸರ್ಕಾರ ಉಳಿಸಲು ಹೋಗಿ ಸಿದ್ದರಾಮಯ್ಯ ವರ್ಚಸ್ಸು ಹಾಳಾಗುತ್ತಿದೆ: ರೇಣುಕಾಚಾರ್ಯ

Shilpa D
ಬೆಂಗಳೂರು: ಸರ್ಕಾರ ಉಳಿಸಲು ಹೋಗಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಅವರ ವರ್ಚಸ್ಸು ಹಾಳಾಗುತ್ತಿದೆ ಎಂದು ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ.
ರಮಡಾ ರೆಸಾರ್ಟ್‌ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸಂಜೆ 4 ಗಂಟೆಯೊಳಗೆ ವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಮುಗಿಸಬೇಕು, 5ಗಂಟೆಯಿಂದ 6 ಗಂಟೆಯೊಳಗೆ ನಿರ್ಣಯವನ್ನು ಮತಕ್ಕೆ ಹಾಕುವುದಾಗಿ ಸ್ಪೀಕರ್ ಹೇಳಿದ್ದಾರೆ. ಅವರು ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಎಷ್ಟೇ ಹಗ್ಗಜಗ್ಗಾಟ ನಡೆದರೂ ಎಲ್ಲಾ ಪ್ರಕ್ರಿಯೆ ಇಂದೇ ಮುಕ್ತಾಯವಾಗಲಿದೆ. ಸಿದ್ದರಾಮಯ್ಯ ಅವರಿಗೆ ತನ್ನದೇ ಆದ ವರ್ಚಸ್ಸು ಇದೆ. ಅವರು ಮೈತ್ರಿ ಸರ್ಕಾರದ ಪರವಾಗಿ ನಿಲ್ಲಬಾರದು, ಕಾಂಗ್ರೆಸ್ ಹೈಕಮಾಂಡ್ ಅವರ ಕೈ ಕಟ್ಟಿಹಾಕಿದೆ. ಅವರು ಮೈತ್ರಿ ಸರ್ಕಾರವನ್ನು ಉಳಿಸಲು ಹೋಗಿ ಅವರ ವರ್ಚಸ್ಸು ಹಾಳಾಗುತ್ತಿದೆ. ಮೈತ್ರಿ ಸರ್ಕಾರ ಉಳಿಯುವುದು ಸಿದ್ದರಾಮಯ್ಯ ಅವರಿಗೂ ಇಷ್ಟವಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.
ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಸಮಯ ಕೂಡಿ ಬಂದಿದೆ. ಇಂದು ವಿಶ್ವಾಸಮತ ಯಾಚನೆಯ ನಿರ್ಣಯವನ್ನು ಮತಕ್ಕೆ ಹಾಕುವುದಾಗಿ ಸ್ಪೀಕರ್ ಹೇಳಿದ್ದಾರೆ, ಅದಕ್ಕೆ ಎರಡೂ ಕಡೆಯವರು ಒಪ್ಪಿದ್ದಾರೆ. ಸಕಾರಾತ್ಮಕ ಬೆಳವಣಿಗೆ ಕಂಡುಬರುತ್ತಿದೆ. ಇಂದು ಕುಮಾರಸ್ವಾಮಿ ಮನೆಗೆ ಹೋಗುವುದು ಮತ್ತು ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದು ಹೇಳಿದರು.
SCROLL FOR NEXT