ರಾಜಕೀಯ

ಯಡಿಯೂರಪ್ಪ ನಿವಾಸದಲ್ಲಿ ಬಿರುಸಿನ ಚಟುವಟಿಕೆ: ಸರ್ಕಾರ ರಚನೆಗೆ ಇಂದು ಹಕ್ಕು ಮಂಡನೆ

Sumana Upadhyaya
ಬೆಂಗಳೂರು:ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದ್ದು, ಇಂದು ಬೆಳಗ್ಗಿನಿಂದಲೇ ಕಾರ್ಯಕರ್ತರು, ಪಕ್ಷದ ಮುಖಂಡರು ಅವರ ನಿವಾಸಕ್ಕೆ ಆಗಮಿಸಿ ಸಹಿ ತಿಂಡಿ ವಿತರಿಸಿ ಹರ್ಷ ವ್ಯಕ್ತಪಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.


ಡಾಲರ್ಸ್ ಕಾಲೋನಿಯ ಯಡಿಯೂರಪ್ಪ ನಿವಾಸದಲ್ಲಿ ಬೆಳಗ್ಗಿನಿಂದಲೇ ಕಾರ್ಯಕರ್ತರು ಜಮಾಯಿಸಲು ಆರಂಭಿಸಿದ್ದಾರೆ. ನಾಳೆ ಅಥವಾ ನಾಡಿದ್ದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.


ಇಂದು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿ ಯಡಿಯೂರಪ್ಪ ಅವರನ್ನು ಅಧಿಕೃತವಾಗಿ ಮತ್ತೊಮ್ಮೆ ಶಾಸಕಾಂಗ ನಾಯಕನಾಗಿ ಆಯ್ಕೆ ಮಾಡುವ ನಿರೀಕ್ಷೆ ಇದೆ. 


ಯಡಿಯೂರಪ್ಪ ಅವರ ನಿವಾಸಕ್ಕೆ ಬಿಜೆಪಿ ಮುಖಂಡರಾದ ಮಾಧುಸ್ವಾಮಿ, ಕೆ.ಜಿ.ಬೋಪಯ್ಯ ಸೇರಿ ಹಲವು ಹಿರಿಯ ಮುಖಂಡರು ಆಗಮಿಸಿ ಸರ್ಕಾರ ರಚಿಸುವ ಬಗ್ಗೆ ಬಿರುಸಿನ ಮಾತುಕತೆ ನಡೆಸಿದ್ದಾರೆ.


ಇಂದು ಗುಪ್ತಚರ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಕೂಡ ಯಡಿಯೂರಪ್ಪ ಅವರ ಮನೆಗೆ ಭೇಟಿ ಮಾಡಿದ್ದಾರೆ. ಪುತ್ರಿ ಅರುಣಾದೇವಿ ಹಾಗೂ ಇತರ ಕುಟುಂಬದ ಸದಸ್ಯರು ಕೂಡ ಆಗಮಿಸಿ ಶುಭಕೋರಿದರು.


ಪುಣೆಯಲ್ಲಿ ತಂಗಿರುವ ಅತೃಪ್ತ ಶಾಸಕರು ಸರ್ಕಾರ ಪತನಗೊಂಡ ಹಿನ್ನೆಲೆಯಲ್ಲಿ ಸಂಭ್ರಮಾಚರಿಸಿದ್ದಾರೆ. ಆದರೆ ಅವರು ಬೆಂಗಳೂರಿಗೆ ಯಾವಾಗ ಬರುತ್ತಾರೆ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ.


ಮೊದಲು ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಲಿದ್ದು, ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ ಬಳಿಕವಷ್ಟೇ ಶಾಸಕರು ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಸಭೆಯಲ್ಲಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಪಕ್ಷೇತರ ಶಾಸಕರಿಬ್ಬರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.


ಅತೃಪ್ತ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಮಂಡಿಸಿದ ವಿಶ್ವಾಸ ಗೊತ್ತುವಳಿ ಬಗ್ಗೆ ನಾಲ್ಕು ದಿನಗಳ ಕಾಲ ಸುದೀರ್ಘ ಚರ್ಚೆ ನಡೆದ ಬಳಿಕ ನಿನ್ನೆ ಸಂಜೆ ಸ್ಪೀಕರ್ ರಮೇಶ್ ಕುಮಾರ್ ಮತಕ್ಕೆ ಹಾಕಿದಾಗ ಅದು ಬಿದ್ದು ಹೋಗಿದೆ. ಇದರೊಂದಿಗೆ ಸರ್ಕಾರ ಪತನಗೊಂಡಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಅವರು ಉಸ್ತುವಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಲಿದ್ದಾರೆ.


ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಿನ್ನೆ ಸಂಜೆಯಿಂದ ಎರಡು ದಿನಗಳ ಕಾಲ 144  ಸೆಕ್ಷನ್‌ನಡಿ ನಿಷೇಧಾಜ್ಞೆ ವಿಧಿಸಲಾಗಿದೆ.
SCROLL FOR NEXT