ರಾಜಕೀಯ

ಬಿಎಸ್‌ವೈ-ರಾಜ್ಯಪಾಲರ ತರಾತುರಿ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ: ಸಿದ್ದರಾಮಯ್ಯ

Srinivasamurthy VN
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ಅವರು ಶುಕ್ರವಾರ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಲು ಮುಂದಾಗುತ್ತಿರುವುದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧಿಸಿದ್ದಾರೆ. 
ಈ ಕುರಿತು ಟ್ವೀಟ್‌ ನಲ್ಲಿ ಅವರು, "ಬಹುಮತ ಇಲ್ಲದೆ ಇದ್ದರೂ ಬಿ ಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲು ಹೊರಟಿರುವುದು ಮತ್ತು ಅವರ ತರಾತುರಿಯ ನಿರ್ಧಾರವನ್ನು ರಾಜ್ಯಪಾಲರು ಒಪ್ಪಿರುವುದು -  ಎರಡೂ ಸಂಸದೀಯ ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಬೆಳವಣಿಗೆಗಳು. ಸಂವಿಧಾನದ ಮೇಲೆ ಯಡಿಯೂರಪ್ಪ ಅವರಿಗೆ  ನಂಬಿಕೆ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ" ಎಂದು ಟೀಕಿಸಿದ್ದಾರೆ. 
ಶುಕ್ರವಾರ ಬೆಳಗ್ಗೆ ರಾಜಭವನದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನು ಭೇಟಿ ಮಾಡಿದ ನಂತರ ಬಿ.ಎಸ್‌ ಯಡಿಯೂರಪ್ಪ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಇಂದು ಸಂಜೆ 6 ರಿಂದ 6.15 ರ ವೇಳೆಗೆ ತಾವು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದಾಗಿ ಹೇಳಿದರು. ಅಲ್ಲದೇ, ಸರ್ಕಾರ ರಚನೆ ಸಂಬಂಧ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ತಾವು ಮಂಡಿಸಿದ ಮನವಿಯನ್ನು ಸಮ್ಮತಿಸಿರುವ ರಾಜ್ಯಪಾಲರು ಸರ್ಕಾರ ರಚಿಸಲು ಸೂಚನೆ ನೀಡಿದ್ದಾರೆ ಎಂದರು.
ಇದರ ಬೆನ್ನಲ್ಲೇ ಟ್ವೀಟ್‌ ಮಾಡಿದ ಸಿದ್ದರಾಮಯ್ಯ ಅವರು, ಬಹುಮತ ಇಲ್ಲದೇ ಇದ್ದರೂ ತುರಾತುರಿಯಲ್ಲಿ ನೂತನ ಮುಖ್ಯಮಂತ್ರಿಯಾಗಲು ಹೊರಟಿರುವ ಬಿ.ಎಸ್‌ ಯಡಿಯೂರಪ್ಪ ಹಾಗೂ ಇದಕ್ಕೆ ಸಮ್ಮತಿ ಸೂಚಿಸಿರುವ ರಾಜ್ಯಪಾಲರ ನಡೆ ಪ್ರಜಾಪ್ರಭುತ್ವಕ್ಕೆ ಮಾರಕವಾದ ಬೆಳವಣಿಗೆ ಎಂದು ಕಿಡಿಕಾರಿದ್ದಾರೆ.  
ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರು, ಕಾರ್ಗಿಲ್‌ ವಿಜಯೋತ್ಸವ ದಿವಸದ ಹಿನ್ನೆಲೆಯಲ್ಲಿ ಮತ್ತೊಂದು ಟ್ವೀಟ್ ನಲ್ಲಿ ಶುಭಾಶಯ ಕೋರಿದ್ದಾರೆ. 
"ಕೊರೆವ ಚಳಿ, ಸುರಿವ ಮಳೆ, ಸುಡುವ ಬಿಸಿಲೆನ್ನದೆ ಸದಾಕಾಲ ದೇಶದ ಗಡಿಯಲ್ಲಿ ನಿಂತು ನಮ್ಮನ್ನು ಕಾಯುವ ವೀರ ಯೋಧರ ತ್ಯಾಗ-ಬಲಿದಾನವೇ ಇಂದು ಭಾರತವನ್ನು ಸುರಕ್ಷಿತ ರಾಷ್ಟ್ರವಾಗಿಸಿದೆ. ರಾಷ್ಟ್ರ ರಕ್ಷಣೆಗಾಗಿ ಪ್ರಾಣಾರ್ಪಣೆಗೈದ ಸಹಸ್ರಾರು ಹುತಾತ್ಮ‌ ಯೋಧರನ್ನು ಕಾರ್ಗಿಲ್‌ ದಿವಸ - ಪುಣ್ಯ ದಿನವನ್ನು ಅತ್ಯಂತ ಗೌರವದಿಂದ ನೆನೆಯುತ್ತೇನೆ" ಎಂದು ಗೌರವ ಸಲ್ಲಿಸಿದ್ದಾರೆ.
SCROLL FOR NEXT