ರಾಜಕೀಯ

ಯಡಿಯೂರಪ್ಪ ಎಷ್ಟು ದಿನ ಅಧಿಕಾರದಲ್ಲಿ ಇರುತ್ತಾರೆ..?: ಡಿ.ಕೆ.ಶಿವಕುಮಾರ್

Srinivas Rao BV
ನವದೆಹಲಿ: ಯಡಿಯೂರಪ್ಪ ಅವರು ಯಾವ ದಾಳ ಇಟ್ಟುಕೊಂಡು ಸರ್ಕಾರ ರಚನೆಗೆ ಮುಂದಾಗಿದ್ದಾರೆಯೋ ಗೊತ್ತಿಲ್ಲ. ನಮ್ಮನ್ನು ಛಲದಿಂದ ಅಧಿಕಾರದಿಂದ ಇಳಿಸಿದ ಅವರು ಎಷ್ಟು ದಿನ ಅಧಿಕಾರದಲ್ಲಿ ಇರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 31 ರೊಳಗೆ ಹಣಕಾಸು ಮಸೂದೆಗಳಿಗೆ ಅಂಗೀಕಾರ ದೊರೆಯಬೇಕಿದೆ. ಇದಕ್ಕೆ ಕಾಂಗ್ರೆಸ್ ಅಡ್ಡಿಪಡಿಸುವುದಿಲ್ಲ. ಯಡಿಯೂರಪ್ಪ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಬಿಜೆಪಿಯಲ್ಲಿಯೇ ಸಚಿವಾಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಅತೃಪ್ತರಿಗೆ ಅವರು ಏನು ಮಾಡುತ್ತಾರೋ ಗೊತ್ತಿಲ್ಲ ಎಂದರು. 
ಬಿಜೆಪಿಯಲ್ಲಿ 75 ವರ್ಷ ದಾಟಿದ ಕಾರಣಕ್ಕಾಗಿ ಎಲ್‍.ಕೆ.ಅಡ್ವಾಣಿ, ಮುರುಳಿ ಮನೋಹರಜೋಷಿ, ಸುಷ್ಮಾ ಸ್ವರಾಜ್ ಅವರಂತಹ ಹಿರಿಯ ನಾಯಕರನ್ನು ಮೂಲೆ ಗುಂಪು ಮಾಡಿದ್ದಾರೆ ಎಂದ ಮೇಲೆ 75 ವರ್ಷ ದಾಟಿದ ಯಡಿಯೂರಪ್ಪ ಅವರಿಗೆ ಮಾತ್ರ ಬಿಜೆಪಿ ನಾಯಕರು ವಿಶೇಷ ವಿನಾಯಿತಿ, ರಿಯಾಯಿತಿ ನೀಡಿದ್ದಾರೆ ಎಂಬ ಸದ್ದು ಬಿಜೆಪಿ ಪಾಳಯದಲ್ಲಿ ಜೋರಾಗಿದೆ ಎಂದರು.
ಕೆಲವರಿಗೆ ನಮ್ಮ ಬಗ್ಗೆ ಮಾತನಾಡಿದರೆ ಮಾತ್ರ ಅವರ ಮಾರುಕಟ್ಟೆ ಮೌಲ್ಯ ಹೆಚ್ಚಾಗುತ್ತದೆ. ಹೀಗಾಗಿ ಅವರು ನಮ್ಮನ್ನು ದೂರುತ್ತಲೇ ಇರುತ್ತಾರೆ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಅವರ ಕಾಲೆಳೆದರು.  ಶಾಸಕ ಸ್ಥಾನದಿಂದ ಅನರ್ಹಗೊಂಡವರಲ್ಲಿ ಯಾರೂ ಅವಿದ್ಯಾವಂತರಲ್ಲ. ಅವರೆಲ್ಲ 2-3 ಬಾರಿ ಶಾಸಕ, ಸಚಿವರಾದವರು. ಅಷ್ಟಕ್ಕೂ ಅವರೆಲ್ಲ ನಮ್ಮ ಗೆಳೆಯರೇ. ಇವರಿಗೆ ಹೀಗೆ  ಆಗಬಾರದಿತ್ತು ಎಂಬ ಮರುಕ ನಮ್ಮಲ್ಲಿದೆ. ಇದು ಅವರೇ ಆಹ್ವಾನಿಸಿಕೊಂಡ ಆಪತ್ತು.  ಇದಕ್ಕೆ ನಾವು  ಏನೂ ಮಾಡಲು ಸಾಧ್ಯವಿಲ್ಲ.  ಸ್ಪೀಕರ್ ನೀಡಿರುವ ತೀರ್ಪನ್ನು ಗೌರವಿಸುತ್ತೇವೆ ಎಂದರು.
SCROLL FOR NEXT