ರಾಜಕೀಯ

ಉಪಮುಖ್ಯಮಂತ್ರಿ ಹುದ್ದೆಗೆ ಜನ ನನ್ನನ್ನು ಗುರುತಿಸಿದ್ದಾರೆ -ಶ್ರೀ ರಾಮುಲು

Nagaraja AB
ಬೆಂಗಳೂರು: ರಾಜ್ಯದಲ್ಲಿ ಕಳೆದ 14 ತಿಂಗಳಿನಿಂದ ಆಡಳಿತ ನಡೆಸುತ್ತಿದ್ದ ಭ್ರಷ್ಟ ಮೈತ್ರಿ ಸರ್ಕಾರ ಪತನವಾಗಿ, ನಮಗೆ ಅಧಿಕಾರ ದೊರಕಿದ್ದು ಸದನದಲ್ಲಿ ನಾವು ಒಮ್ಮೆ ಗೆದ್ದಿದ್ದು, ಮತ್ತೊಮ್ಮೆ ಬಹುಮತ ಸಾಬೀತುಪಡಿಸುತ್ತೇವೆ ಎಂದು ಬಿಜೆಪಿ ಶಾಸಕ ಶ್ರೀ ರಾಮುಲು ಸಂತಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ನಿರೀಕ್ಷೆಯಂತೆ, ಸ್ವಚ್ಛ , ಪ್ರಾಮಾಣಿಕ ಹಾಗೂ ಸುಭದ್ರ ಆಡಳಿತ ನೀಡಲು ಯಡಿಯೂರಪ್ಪ ಅವರಿಂದ ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪ 40 ವರ್ಷಗಳ‌ ಕಾಲ ಸಾರ್ವಜನಿಕ ಕ್ಷೇತ್ರದಲ್ಲಿದ್ದು, ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ರಾಜ್ಯಕ್ಕೆ  ಉತ್ತಮ ಆಡಳಿತ ನೀಡಲಿ, ಈ ನಾಡಿನ ಜನರ ಆಶೀರ್ವಾದ ಅವರ ಮೇಲಿದ್ದು, ಅವರ ಮುಖ್ಯಮಂತ್ರಿ ಅಧಿಕಾರ ರಾಜ್ಯವನ್ನು ಉತ್ತುಂಗಕ್ಕೆ ಕೊಂಡೊಯ್ಯಲಿ ಎಂದು ಅವರು ಶುಭಕೋರಿದರು.
ಉಪಮುಖ್ಯಮಂತ್ರಿ ಹುದ್ದೆಗೆ ಜನ ಈಗಾಗಲೇ ನನ್ನನ್ನು ಗುರುತಿಸಿದ್ದಾರೆ. ನಾನು ಸ್ಥಾನಮಾನಕ್ಕಾಗಿ ದುಡಿಯುವವನಲ್ಲ, ಪಕ್ಷಕ್ಕಾಗಿ ದುಡಿಯುತ್ತೇನೆ. ಪಕ್ಷದ ನಿರ್ಣಯಕ್ಕೆ ಬದ್ಧನಾಗಿದ್ದೇನೆ. ಪಕ್ಷದ ತೀರ್ಮಾನ, ದೇವರ ಇಚ್ಚೆಯಂತೆ ನಡೆಯಲಿ. ನನಗೆ ಪಕ್ಷ ಮುಖ್ಯ, ಹುದ್ದೆಯಲ್ಲ. ಜನರ ಭಾವನೆಗೆ ಬೆಲೆ ಕೊಡುತ್ತೇನೆ. ಆದರೆ, ಪಕ್ಷದ ನಿರ್ಣಯ ಅಂತಿಮವಾಗಿರಲಿದೆ ಎಂದರು.
ಮೂವರು ಶಾಸಕರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿದ್ದು, ಉಳಿದ ಶಾಸಕರನ್ನು ಕೂಡ ಅನರ್ಹಗೊಳಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಪಕ್ಷಪಾತ ನಡೆಯುತ್ತಿದೆ. ಇದು ಸರಿಯಲ್ಲ, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ಕುತಂತ್ರದಿಂದ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಿದರು.
SCROLL FOR NEXT