ರಾಜಕೀಯ

ವಿಶ್ವಾಸಮತಯಾಚಿಸಿ, ಧನ ವಿನಿಯೋಗ ವಿಧೇಯಕ ಮಂಡನೆ- ಮುಖ್ಯಮಂತ್ರಿ ಯಡಿಯೂರಪ್ಪ

Nagaraja AB
ಬೆಂಗಳೂರು: ನಾಳೆ ವಿಧಾನಸಭೆಯಲ್ಲಿ ವಿಶ್ವಾಸಮತಯಾಚಿಸುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ರಾತ್ರಿ ನಡೆದ ಬಿಜೆಪಿ ಶಾಸಕಾಂಗ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಾಸಮತಯಾಚನೆ ಹಿನ್ನೆಲೆಯಲ್ಲಿ ಶಾಸಕರೊಂದಿಗೆ ವಿಸ್ಕೃತವಾಗಿ ಚರ್ಚಿಸಿದ್ದೇನೆ. ವಿಶ್ವಾಸಮತ ಯಾಚನೆ ಬಳಿಕ ಧನ ವಿನಿಯೋಗ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆಯಲಾಗುವುದು ಎಂದು ತಿಳಿಸಿದರು.
ಧನವಿನಿಯೋಗ ವಿಧೇಯಕಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬೆಂಬಲಿಸುತ್ತೇವೆ ಅಂದುಕೊಂಡಿದ್ದೇನೆ. ದ್ವೇಷದ ರಾಜಕಾರಣ ಮಾಡಲ್ಲ, ಎಲ್ಲ ಪಕ್ಷಗಳ ಸಹಕಾರ ಪಡೆದು, ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ದಿಗೆ ಗಮನ ಕೊಡಲು ನಿರ್ಧಾರ ಮಾಡಲಿರುವುದಾಗಿ ಹೇಳಿದರು.
ಶಾಸಕಾಂಗ ಸಭೆಯ ಬಗ್ಗೆ ವಿವರ ನೀಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, 105  ಪಕ್ಷದ ಶಾಸಕರಲ್ಲದೇ ಒಂದು ಅಥವಾ ಎರಡು ಪಕ್ಷೇತರ ಅಭ್ಯರ್ಥಿಗಳು ಬೆಂಬಲಿಸುವ ಸಾಧ್ಯತೆ ಇದೆ. ಸದನದಲ್ಲಿ ಬಹುಮತ ಸಾಬೀತುಪಡಿಸುವ ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು.
ವಿಶ್ವಾಸಮತದ ಹಿನ್ನೆಲೆಯಲ್ಲಿ ವಿಪ್ ಜಾರಿ ಮಾಡಲಾಗಿದ್ದು, ಎಲ್ಲ ಶಾಸಕರು ಹಾಜರಾಗುವಂತೆ ನೋಡಿಕೊಳ್ಳುವಂತೆ 12 ಶಾಸಕರಿಗೆ ಜವಾಬ್ದಾರಿ  ನೀಡಲಾಗಿದೆ. ಧನ ವಿನಿಯೋಗ ವಿಧೇಯಕ ಅಂಗೀಕಾರಕ್ಕೆ ಸಹಕರಿಸುವಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರನ್ನು ಕೋರುತ್ತೇವೆ. ರಾಜೀನಾಮೆ ನೀಡಿರುವ ಶಾಸಕರನ್ನು ಅನರ್ಹಮಾಡಿರುವ ಸ್ಪೀಕರ್ ಕ್ರಮವನ್ನು ಸದನದಲ್ಲಿ ಖಂಡಿಸಲಾಗುವುದು ಎಂದು ರವಿಕುಮಾರ್ ತಿಳಿಸಿದರು.
SCROLL FOR NEXT