ರಾಜಕೀಯ

ರಾಜ್ಯದಲ್ಲಿ ಬಾಕಿ ಉಳಿದಿರುವ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ- ಸುರೇಶ್ ಅಂಗಡಿ

Nagaraja AB

ಬೆಳಗಾವಿ: ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸ್ವ ಕ್ಷೇತ್ರ  ಬೆಳಗಾವಿಗೆ ಆಗಮಿಸಿದ ಸುರೇಶ್ ಅಂಗಡಿ ಅವರಿಗೆ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಅದ್ದೂರಿ ಸ್ವಾಗತ ನೀಡುವ ಮೂಲಕ ಬರಮಾಡಿಕೊಂಡರು.

ಬೆಳಗಾವಿ ನಗರಕ್ಕೆ ಆಗಮಿಸುವ ಮುನ್ನ ಸುರೇಶ್ ಅಂಗಡಿ ಹಾಗೂ ಅವರ ಪತ್ನಿ ಮಂಗಳಾ  ಸಾಂಬ್ರಾದಲ್ಲಿನ  ಮಹಾಲಕ್ಷ್ಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಅಂಗಡಿ, ರಾಜ್ಯದಲ್ಲಿ ಬಾಕಿ ಉಳಿದಿರುವ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಬೆಳಗಾವಿ ಜನರ ಆಶೀರ್ವಾದದಿಂದ ಕೇಂದ್ರ ಸಚಿವನಾಗಿದ್ದು, ರೈಲ್ವೆ ಸಚಿವನಾಗಿ ಯೋಜನೆಗಳು ಹಾಗೂ ಸರಣಿ ಕೆಲಸಗಳ ಕಡೆ ಗಮನ ಹರಿಸಲಾಗುವುದು, ಅವುಗಳ ಮಹತ್ವ ಅರಿತು ಕೈಗೆತ್ತಿಕೊಳ್ಳಲಾಗುವುದು, ಈ ಭಾಗದಲ್ಲಿ ಬಾಕಿ ಉಳಿದಿರುವ ಯೋಜನೆಗಳ ಸಂಬಂಧ ಹುಬ್ಬಳ್ಳಿ ಹಾಗೂ ಬೆಂಗಳೂರಿನ ರೈಲ್ವೆ ಇಲಾಖೆಯ ಜನರಲ್ ಮ್ಯಾನೇಜರ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ.ಈ ಯೋಜನೆಗಳ ಅನುಷ್ಠಾನ ಸಂಬಂಧ ಕೂಡಲೇ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಅವರು ಹೇಳಿದರು.

ಸ್ಥಳೀಯ ಯಾತ್ರಾ ಸ್ಥಳ ಸವದತ್ತಿಗೆ ರೈಲು ಸಂಪರ್ಕ ಕಲ್ಪಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಕೇಂದ್ರ ಸರ್ಕಾರದೊಂದಿಗೆ ರಾಜ್ಯಸರ್ಕಾರ ನೆರವು ನೀಡಿದರೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

SCROLL FOR NEXT