ರಾಜಕೀಯ

ಸಿಎಂ ಜನರ ದಾರಿ ತಪ್ಪಿಸುತ್ತಿದ್ದಾರೆ: ಜಿಂದಾಲ್ ನಿಂದ 20 ಕೋಟಿ ರು. ಚೆಕ್ ಆರೋಪಕ್ಕೆ ಬಿಎಸ್ ವೈ ತಿರುಗೇಟು

Lingaraj Badiger
ಬೆಂಗಳೂರು: ಜಿಂದಾಲ್ ಕಂಪನಿಯಿಂದ ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ 20 ಕೋಟಿ ರೂ ಚೆಕ್ ಮೂಲಕ ಹಣ ಪಡೆದಿದ್ದರು ಎಂಬ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಮಂಗಳವಾರ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಯಡಿಯೂರಪ್ಪ ಅವರು, ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಹೊಣೆಗೇಡಿತನದಿಂದ ಮಾತನಾಡುವುದು ಸರಿಯಲ್ಲ. ಸಿಬಿಐ ನ್ಯಾಯಾಲಯ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಖುಲಾಸೆಗೊಳಿಸಿದೆ, ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವಂತೆ ತಾವು ಹಗುರವಾಗಿ ಮಾತನಾಡಬೇಡಿ, ರಾಜ್ಯದಲ್ಲಿ ಆಡಳಿತ ನೀಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿ, ದಿಕ್ಕೆಟ್ಟಿರುವ ನೀವು ನಿಮ್ಮ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳುವ ವ್ಯರ್ಥ ಪ್ರಯತ್ನ ಮಾಡಬೇಡಿ ಎಂದಿದ್ದಾರೆ. 
ಸಿಎಂ ಕುಮಾರಸ್ವಾಮಿ ತಮ್ಮ ಹುಳುಕು ಮುಚ್ಚಿಹಾಕಿಕೊಳ್ಳುವ ಸಲುವಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಆ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜಿಂದಾಲ್ ಸ್ಟೀಲ್ ಕಂಪನಿಗೆ 3667 ಎಕರೆ ಜಮೀನು ಪರಭಾರೆ ಪ್ರಕರಣ ಸಂಬಂಧ ಬಿಜೆಪಿ ಮೂರು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿದ್ದನ್ನು ಸೋಮವಾರ ಚೆನ್ನಪಟ್ಟಣದಲ್ಲಿ ಮುಖ್ಯಮಂತ್ರಿ ವ್ಯಂಗ್ಯವಾಡಿದ್ದರು. ಜಿಂದಾಲ್ ಕಂಪನಿಯಿಂದ 20 ಕೋಟಿ ರೂ ಚೆಕ್ ಪಡೆದಿದ್ದ ಯಡಿಯೂರಪ್ಪ, ಇಂದು ಜಿಂದಾಲ್ ಕಂಪನಿ ವಿರುದ್ಧವೇ ಹೋರಾಟ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದ್ದರು.
ಮುಖ್ಯಮಂತ್ರಿ ಅವರ ಮಾತಿಗೆ ಇಂದು ಸಾಮಾಜಿಕ ಜಾಲತಾಣದ ಮೂಲಕ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
SCROLL FOR NEXT