ರಾಜಕೀಯ

ಜನರ ಮೇಲೆ ಮಾನಸಿಕ ದೌರ್ಜನ್ಯ ಎಸಗಿದರೆ ಸಿಎಂ ಗ್ರಾಮ ವಾಸ್ತವ್ಯ ತಡೆಯುತ್ತೇವೆ: ಯಡಿಯೂರಪ್ಪ

Raghavendra Adiga
ಬೆಂಗಳೂರು: ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಜನ ಮೇಲೆ ಮಾನಸಿಕ ದೌರ್ಜನ್ಯ ಮುಂದುವರೆಸಿದ್ದೇ ಆದಲ್ಲಿ ನಿಮ್ಮ ಗ್ರಾಮ ವಾಸ್ತವ್ಯ ನಡೆಯದಂತೆ ತಡೆಯುತ್ತೇವೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಬುಧವಾರ ಎಚ್ಚರಿಕೆ ನೀಡಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ತಮ್ಮ ಗ್ರಾಮ ವಾಸ್ತವ್ಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ " ಸಮಸ್ಯೆ ಪರಿಹರಿಸಲು ನಾವು ಬೇಕು, ಓಟು ಮಾತ್ರ ಮೋದಿ ಅವರಿಗೆ ಹಾಕುತ್ತೀರಾ " ಎಂದು ಕುಮಾರ ಸ್ವಾಮಿ ಮಾರ್ಗಮಧ್ಯೆ ಪ್ರತಿಭಟನಾಕಾರರನ್ನು ಪ್ರಶ್ನಿಸಿದ್ದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ಈ ರೀತಿ ದೌರ್ಜನ್ಯದಿಂದ ಕೂಡಿದ ನಿಮ್ಮ ಗ್ರಾಮ ವಾಸ್ತವ್ಯವನ್ನು ಜನ ಸಹಿಸುವುದಿಲ್ಲ. ನಿಮ್ಮ ವರ್ತನೆ ಕೂಡ ದೌರ್ಜನ್ಯದಿಂದ ಕೂಡಿದೆ, ಇದೇ ರೀತಿ ನೀವು ಜನರ ಮೇಲೆ ಮಾನಸಿಕ ದೌರ್ಜನ್ಯ ಮುಂದುವರಿಸಿದರೆ ನಾವು ಸಹಿಸುವುದಿಲ್ಲ. ಅಷ್ಟೇ ಅಲ್ಲದೇ ನಾವು ರಾಜ್ಯವ್ಯಾಪಿ ಆಂದೋಲನ ಹಮ್ಮಿಕೊಳ್ಳುತ್ತೇವೆ. ಸಮಯ ಬಂದರೆ ನಿಮ್ಮ ಗ್ರಾಮ ವಾಸ್ತವ್ಯವೂ ನಡೆಯದಂತೆ ನೋಡಿಕೊಳ್ಳುತ್ತೇವೆ. ನಿಮ್ಮ ಜನವಿರೋಧಿ ಗ್ರಾಮ ವಾಸ್ತವ್ಯಕ್ಕೆ ನಮ್ಮ ಧಿಕ್ಕಾರ ಎಂದಿದ್ದಾರೆ. 
ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಈ ರೀತಿ ಸಂಯಮ ಕಳೆದುಕೊಳ್ಳುತ್ತಿರುವುದು ಇದು ಮೊದಲಲ್ಲ. ಜನರೆಂದರೆ ಯಾವಾಗಲೂ ಅವರಿಗೆ ಅಲರ್ಜಿ. ಅದರಲ್ಲೂ ಉತ್ತರ ಕರ್ನಾಟಕದ ಜನತೆ ಕಂಡರೆ ಆಗುವುದಿಲ್ಲ. ಹೀಗಾಗಿ ತಮ್ಮ ಗ್ರಾಮ ವಾಸ್ತವ್ಯ ಬೂಟಾಟಿಕೆ ಎಂಬುದನ್ನು ಮುಖ್ಯಮಂತ್ರಿಯವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಜನರ ಬಗ್ಗೆ ಇರುವ ಅದರಲ್ಲೂ ರಾಜ್ಯದಲ್ಲಿ ಬಿಜೆಪಿ ಗೆದ್ದ ಕಾರಣ ಸಂಯಮ ಕಳೆದುಕೊಳ್ಳುತ್ತಿರುವುದು ಅವರ ಕೊಳಕು ಮನಸ್ಸನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದ್ದಾರೆ. 
ಮೋದಿ ಅವರಿಗೆ ಬಿಜೆಪಿಗೆ ಮತ ಹಾಕಿದರು ಎಂಬ ಕಾರಣಕ್ಕೆ ಹೀಯಾಳಿಸಿ ಮಾತನಾಡುವುದು ತಮ್ಮ ಮುಖ್ಯಮಂತ್ರಿ ತಮ್ಮ ತಾವೇ ಅಪಮಾನ ಮಾಡಿಕೊಂಡಿದ್ದಾರೆ. ಹಳ್ಳಿಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಜನರ ಭಾವನೆಗಳನ್ನು ಹತ್ತಿಕ್ಕಿ ನೀವು ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಮತ್ತು ಜನ ವಿರೋಧಿ ಕ್ರಮ ಎಂದು ಯಡಿಯೂರಪ್ಪ ಕಿಡಿ ಕಾರಿದ್ದಾರೆ.
SCROLL FOR NEXT