ರಾಜಕೀಯ

ತಳಮಟ್ಟದಿಂದ ಪಕ್ಷವನ್ನು ಬಲಪಡಿಸಲು ಜೆಡಿಎಸ್ ನಿಂದ ಪಾದಯಾತ್ರೆ

Sumana Upadhyaya
ಬೆಂಗಳೂರು: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಿದ್ದ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಇದೀಗ ತಮ್ಮ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ರಾಜ್ಯಾದ್ಯಂತ ಪಾದಯಾತ್ರೆಗೆ ಸಜ್ಜಾಗಿದ್ದಾರೆ. 
ಆಗಸ್ಟ್ 20ರಿಂದ ಪಾದಯಾತ್ರೆಗೆ ನಾವು ಸಜ್ಜಾಗಿದ್ದು 6 ತಿಂಗಳಲ್ಲಿ ಇಡೀ ರಾಜ್ಯವನ್ನು ಸುತ್ತಬೇಕೆಂದುಕೊಂಡಿದ್ದೇವೆ ಎಂದು ಜೆಡಿಎಸ್ ನಾಯಕ ವೈ ಎಸ್ ವಿ ದತ್ತ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
ದೇವೇಗೌಡ, ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಇತರ ಪಕ್ಷದ ಹಿರಿಯ ನಾಯಕರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇವಲ ದಕ್ಷಿಣ ಕರ್ನಾಟಕದ ಮೂರು ಜಿಲ್ಲೆಗಳು ಮಾತ್ರವಲ್ಲದೆ ಜೆಡಿಎಸ್ ನ ಅಸ್ಥಿತ್ವವನ್ನು ರಾಜ್ಯದ ಬೇರೆ ಜಿಲ್ಲೆಗಳಿಗೆ ಕೂಡ ವಿಸ್ತರಿಸುವುದು ಪಾದಯಾತ್ರೆಯ ಉದ್ದೇಶವಾಗಿದೆ.
ಇತ್ತೀಚಿನ ಲೋಕಸಭೆ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆಯಿಂದ ಬೇಸತ್ತಿರುವ ದೇವೇಗೌಡರು ತಮ್ಮ ಪಕ್ಷವನ್ನು ರಾಜ್ಯದಲ್ಲಿ ಮರುನಿರ್ಮಾಣ ಮಾಡುವತ್ತ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದರು. ಜೆಡಿಎಸ್ ಲೋಕಸಭೆ ಚುನಾವಣೆಯಲ್ಲಿ ಕೇವಲ ಒಂದು ಸೀಟುಗಳನ್ನು ಮಾತ್ರ ಗೆದ್ದಿದ್ದು ದೇವೇಗೌಡರೇ ತುಮಕೂರಿನಿಂದ ಸೋತಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಮೂರನೇ ಸ್ಥಾನ ಗಳಿಸಿದೆ.
ಕರ್ನಾಟಕದಲ್ಲಿ ಬಲವಾದ ಸ್ಥಳೀಯ ಪಕ್ಷದ ಅವಶ್ಯಕತೆಯಿದ್ದು ರಾಜ್ಯದ ಬೆಳವಣಿಗೆಗೆ ಏನು ಮಾಡಬಹುದು ಎಂದು ತೋರಿಸಿಕೊಡಲು ಪಾದಯಾತ್ರೆ ಮಾಡಲಾಗುತ್ತದೆ. ರಾಜ್ಯದಲ್ಲಿ ಪಕ್ಷದ ಕಾರ್ಯಚಟುವಟಿಕೆಗಳು ಮತ್ತು ನೀತಿನಿಯಮಗಳ ಕುರಿತು ಪಾದಯಾತ್ರೆ ವೇಳೆ ಮಾತನಾಡುತ್ತೇವೆ. ಪಾದಯಾತ್ರೆಯಲ್ಲಿ ಜನರ ನಂಬಿಕೆ ಗಳಿಸುವುದು ಕೂಡ ನಮ್ಮ ಉದ್ದೇಶವಾಗಿದೆ ಎಂದು ವೈ ಎಸ್ ವಿ ದತ್ತ ತಿಳಿಸಿದರು.
SCROLL FOR NEXT