ರಾಜಕೀಯ

ಉಮೇಶ್ ಜಾಧವ್ ಬಿಜೆಪಿ ಸೇರುವ ಸಾಧ್ಯತೆ, ಖರ್ಗೆ ವಿರುದ್ಧ ಸ್ಪರ್ಧೆ

Lingaraj Badiger
ಕಲಬುರಗಿ: ಲೋಕಸಭಾ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಮತ್ತಷ್ಟು ಮುಜುಗರದ ಸನ್ನಿವೇಶ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಹಾಲಿ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್  ಅವರು ಪಕ್ಷ ತೊರೆದು ಬಿಜೆಪಿ ಅಭ್ಯರ್ಥಿಯಾಗಿ ಅದೂ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧವೇ ತೊಡೆತಟ್ಟಲಿದ್ದಾರೆ. 
ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಬಾಬುರಾವ್ ಚಿಂಚನಸೂರ್ ಅವರು, ಜಾದವ್ ಅವರು ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದು ಪಕ್ಕ ಎಂದು ಖಚಿತಪಡಿಸಿದರು.
ಜಾಧವ್ ಗೆಲುವಿನ ವೇದಿಕೆ ಸಿದ್ಧವಾಗಿದೆ. ಸಮುದಾಯಕ್ಕೆ ಮಾಡಿದ ಅನ್ಯಾಯಕ್ಕಾಗಿ ಕಾಂಗ್ರೆಸ್ ವಿರುದ್ಧ ದಂಗೆಯೇಳುವ ಮೂಲಕ ಕೋಲಿ ಸಮುದಾಯದ ಜನರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕೋಲಿ ಸಮುದಾಯಕ್ಕೆ ಖರ್ಗೆ ಅವರು ಸಾಕಷ್ಟು ಅನ್ಯಾಯ ಮಾಡಿದ್ದು, ಇದರ ಬಗ್ಗೆ ಸೇಡು ತೀರಿಸಿಕೊಳ್ಳಲು ಜನತೆ ಮಂದಾಗಬೇಕು  ಎಂದರು.
1989 ರಲ್ಲಿ ಕಾಂಗ್ರೆಸ್ ಟಿಕೆಟ್, ಪಡೆಯುವ ಮೂಲಕ ನಾನು ರಾಜಕೀಯದಲ್ಲಿದ್ದಿದ್ದೇನೆ. ಆದರೆ ಖರ್ಗೆ ಅವರು ಕಳೆದ 50 ವರ್ಷಗಳಿಂದಲೂ ಅಧಿಕಾರದ ಅನುಭೋಗದಲ್ಲಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ಮನವಿಯನ್ನು 50 ವರ್ಷಗಳಿಂದಲೂ ಜಾರಿ ಮಾಡದೆ ಖರ್ಗೆ ಬಹಳ ಅನ್ಯಾಯ ಮಾಡಿ ತಮ್ಮನ್ನು ಸಚಿವ ಸ್ಥಾನದಿಂದ ದೂರವಿರಿಸಿ ಅವರ ಮಗನನ್ನು ಸಚಿವರನ್ನಾಗಿ ಮಾಡಿದರು ಎಂದು ಚಿಂಚನಸೂರ್ ಆರೋಪಿಸಿದರು.
ಕೋಲಿ ಸಮುದಾಯವನ್ನೂ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ತಾವು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ರಾಜನಾಥ್  ಸಿಂಗ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸಿರುವುದಾಗಿ ಅವರು ಹೇಳಿದರು.
SCROLL FOR NEXT