ರಾಜಕೀಯ

ಪುಟಗೋಸಿ ನಿಗಮ ಮಂಡಳಿ ಅಧ್ಯಕ್ಷಗಿರಿ ಯಾರಿಗೆ ಬೇಕು?: ಸಿಎಂ ವಿರುದ್ಧ ಸುಧಾಕರ್ ಆಕ್ರೋಶ

Lingaraj Badiger
ಚಿಕ್ಕಬಳ್ಳಾಪುರ: ಪುಟಗೋಸಿ ನಿಗಮ ಮಂಡಳಿ ಸ್ಥಾನವನ್ನು ನೀವು ಕೈ ತಪ್ಪಿಸಿರಬಹುದು. ಆದರೆ ನನ್ನ ಶಾಸಕ ಸ್ಥಾನವನ್ನು ಕಿತ್ತುಕೊಳ್ಳಲು ನಿಮ್ಮಿಂದ ಆಗುವುದಿಲ್ಲ. ಅದು ನಿಮ್ಮ ಹಣೆಯಲ್ಲೂ ಬರೆದಿಲ್ಲ ಎಂದು ಕಾಂಗ್ರೆಸ್ ಶಾಸಕ ಡಾ. ಸುಧಾಕರ್ ಅವರು ಪರೋಕ್ಷವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕಿಡಿಕಾರಿದ್ದಾರೆ.
ಇಂದು ಹನುಮಂತಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪುಟಗೋಸಿ ನಿಗಮ ಮಂಡಳಿ ಅಧ್ಯಕ್ಷಗಿರಿ ಯಾರಿಗೆ ಬೇಕು? ಶಾಸಕ ಸ್ಥಾನ ತಪ್ಪಿಸಲು ನಿಮ್ಮ ಕೈಯಲ್ಲಿ ಸಾಧ್ಯವಿಲ್ಲ. ಎರಡು ಬಾರಿ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಿದ್ದೇನೆ. ಜನರ ಆಶೀರ್ವಾದ ತಮಗಿದೆ ಎಂದು ಹೆಸರು ಹೇಳದೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಕೈತಪ್ಪಿದ್ದಕ್ಕೆ ಕುಮಾರಸ್ವಾಮಿ ಅವರೇ ಕಾರಣ ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಗಳಿದರೆ ಕೆಲವರಿಗೆ ಉರಿಯುತ್ತದೆ. ಅವರು ನಮ್ಮ ಮುಖ್ಯಮಂತ್ರಿ ಅಂದರೆ ಕೆಲವರು ಮೈ ಪರಚಿಕೊಳ್ಳುತ್ತಾರೆ. ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಅವರೇ ನಮ್ಮ ನೆಚ್ಚಿನ ನಾಯಕ. ನಮ್ಮ ನಾಯಕರನ್ನು ಹೊಗಳಿದರೆ ಕೆಲವರಿಗೆ ಆಗುವುದಿಲ್ಲ ಎಂದು ಜೆಡಿಎಸ್ ಸಚಿವರ ವಿರುದ್ಧವೂ ಅಸಮಾಧಾನ ಹೊರಹಾಕಿದರು.
ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣಾ ಟಿಕೆಟ್ ಕಾಂಗ್ರೆಸ್ ಪಕ್ಷಕ್ಕೆ ನೀಡಬೇಕು. ಯಾವುದೇ ಕಾರಣಕ್ಕೂ ಜೆಡಿಎಸ್‍ಗೆ ಬಿಟ್ಟುಕೊಡಬಾರದು. ಒಂದು ವೇಳೆ ಬಿಟ್ಟುಕೊಟ್ಟರೆ ಸ್ವಪಕ್ಷೀಯರ ವಿರುದ್ಧವಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ಹೈಕಮಾಂಡಿಗೆ ಸುಧಾಕರ್ ಎಚ್ಚರಿಕೆಯ ಸಂದೇಶ ರವಾನಿಸಿದರು.
SCROLL FOR NEXT