ರಾಜಕೀಯ

ಬಿಜೆಪಿ ಸೇರ್ಪಡೆ ಸುಳಿವು ನೀಡಿದ ಎ.ಮಂಜು, ಪ್ರಜ್ವಲ್ ರೇವಣ್ಣ ವಿರುದ್ಧ ಸ್ಪರ್ಧೆ ಸಾಧ್ಯತೆ

Lingaraj Badiger
ಬೆಂಗಳೂರು: ಮಾಜಿ ಸಚಿವ ಎ.ಮಂಜು ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುವು ಸುಳಿವು ನೀಡಿದ್ದು, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಲೋಕಸಭೆಗೆ ಚುನಾವಣೆ ಸ್ಪರ್ಧಿಸುವ ಸಾಧ್ಯತೆ ಇದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಜೊತೆ  ಮಾತಾನಾಡಿರುವುದು ನಿಜ. ರಾಜಕೀಯ ನಿಂತ ನೀರಲ್ಲ ಕ್ಷೇತ್ರದ ಜನರ ರಕ್ಷಣೆಗೋಸ್ಕರ ಮತದಾರರ ಅಭಿಪ್ರಾಯದಂತೆ ತಾವು ತೀರ್ಮಾನ ಕೈಗೊಳ್ಳುವುದಾಗಿ ಎ.ಮಂಜು ಹೇಳಿದ್ದಾರೆ. 
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಬಿಜೆಪಿ  ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತನಾಡಿರುವುದು ಸತ್ಯ.  ಅಂತೆಯೇ ಮೈಸೂರಿನಲ್ಲಿ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಮಾಡಿ ಚರ್ಚೆ  ನಡೆಸಿದ್ದೇನೆ. ಗುರುವಾರ ಅರಕಲಗೂಡಿನಲ್ಲಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರ ಸಭೆ ಕರೆದಿದ್ದೇನೆ. ಕಾರ್ಯಕರ್ತರು ತೆಗೆದುಕೊಳ್ಳುವ ತೀರ್ಮಾನಕ್ಕೆ ತಾವು ಬದ್ದನಾಗಿದ್ದು, ಒಂದೆರಡು ದಿನಗಳಲ್ಲಿ  ತಮ್ಮ ನಿಲುವು ಸ್ಪಷ್ಟಪಡಿಸುವುದಾಗಿ ಹೇಳಿದ್ದಾರೆ.
ಇದೇ ವೇಳೆ ಜೆಡಿಎಸ್-ಕಾಂಗ್ರೆಸ್ ಸೀಟು ಹಂಚಿಕೆ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೈತ್ರಿ ಧರ್ಮವನ್ನು ಎರಡು ಪಕ್ಷಗಳು ಪಾಲಿಸಬೇಕು. ತುಮಕೂರು, ಮೈಸೂರು ಬಿಟ್ಟು ಕೊಡಿ ಎಂದು ಕೇಳುವುದು ಮೈತ್ರಿ ಧರ್ಮವೇ ಅಲ್ಲ ಎಂದರು. 
ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವ ಕೆಲಸವನ್ನು ಜೆಡಿಎಸ್ ವ್ಯವಸ್ಥಿತವಾಗಿ ಮಾಡುತ್ತಿದೆ. ಈಗ ಮೊಮ್ಮಕ್ಕಳನ್ನು ದಡ ಸೇರಿಸುವ ಕೆಲಸವನ್ನು ಮಾಜಿ ಪ್ರಧಾನಿ ದೇವೇಗೌಡರು ಮಾಡುತ್ತಿದ್ದಾರೆ ಹೊರತು  ಮೈತ್ರಿ ಧರ್ಮವನ್ನು ಜೆಡಿಎಸ್ ಪಾಲನೆ ಮಾಡುತ್ತಿಲ್ಲ ಎಂದು ಜೆಡಿಎಸ್ ನಾಯಕರ ವರ್ತನೆ ಬಗ್ಗೆ ಕಿಡಿಕಾರಿದರು.
ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ದೇಶಕ್ಕೆ ಯಾವುದಕ್ಕೂ ಲಾಭವಿಲ್ಲ. ಕೇವಲ ಜೆಡಿಎಸ್ ಕುಟುಂಬಕ್ಕೆ ಮಾತ್ರ ಲಾಭ. ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೂ ಇದರಿಂದ ಲಾಭವಿಲ್ಲ. ಚುನಾವಣಾ ಮೈತ್ರಿಯಿಂದ ಕಾಂಗ್ರೆಸ್ ಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂದು ಅಭಿಪ್ರಾಯಪಟ್ಟರು.
SCROLL FOR NEXT